ಮನೆ ರಾಜ್ಯ ಕರ್ನಾಟಕದಲ್ಲಿ ಹೆಲಿಕಾಪ್ಟರ್‌ಗಳಿಗೆ ಲಕ್ಷ ಲಕ್ಷ ಬಾಡಿಗೆ, ಪಾರ್ಕಿಂಗ್‌ ದರವೂ ದುಬಾರಿ

ಕರ್ನಾಟಕದಲ್ಲಿ ಹೆಲಿಕಾಪ್ಟರ್‌ಗಳಿಗೆ ಲಕ್ಷ ಲಕ್ಷ ಬಾಡಿಗೆ, ಪಾರ್ಕಿಂಗ್‌ ದರವೂ ದುಬಾರಿ

0

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರುವುದರಿಂದ ಹೆಲಿಕಾಪ್ಟರ್‌ಗಳಿಗೆ ಭಾರೀ ಬೇಡಿಕೆ ಬಂದಿದೆ. ಮೂರು ಪಕ್ಷದ ನಾಯಕರು ಲೋಹದ ಹಕ್ಕಿಗಳ ಮೊರೆ ಹೋಗಿದ್ದು, ದರ ಕೂಡ ಗಗನಕ್ಕೇರಿದೆ. ರಾಷ್ಟ್ರೀಯ ನಾಯಕರು ಹಾಗೂ ಅನ್ಯರಾಜ್ಯಗಳ ನಾಯಕರು ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸುತ್ತಿರುವುದರಿಂದ ಸಹಜವಾಗಿಯೇ ಹೆಲಿಕಾಪ್ಟರ್‌, ಮಿನಿ ಏರ್‌ಕ್ರಾಪ್ಟ್‌ಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.

 

ಪ್ರಮುಖ ನಾಯಕರು ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಮಾಡಲು ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದ್ದಾರೆ. ಈಗಾಗಲೇ ಕೆಲ ನಾಯಕರು ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದ್ದು, ಚುನಾವಣೆ ಮುಗಿಯವವರೆಗೂ ಅವುಗಳನ್ನು ಬಳಸಲಿದ್ದಾರೆ. ಹಲವು ಹೆಲಿಕಾಪ್ಟರ್‌ಗಳನ್ನು ರಾಜಕೀಯ ನಾಯಕರು, ಪಕ್ಷಗಳು ಮುಂಗಡವಾಗಿ ಕಾಯ್ದಿರಿಸಿವೆ.

ಸದ್ಯ ಕರ್ನಾಟಕದಲ್ಲಿ ಒಟ್ಟು 100 ಹೆಲಿಕಾಪ್ಟರ್‌ಗಳು ಇವೆ ಎಂಬ ಮಾಹಿತಿ ಇದ್ದು, ಚುನಾವಣೆ ಮತಪ್ರಚಾರ ಹಾಗೂ ಇನ್ನಿತರ ಕಾರಣಗಳಿಗಾಗಿ ಸುಮಾರು 150 ಹೆಲಿಕಾಪ್ಟರ್ಗಳು, ಮಿನಿ ವಿಮಾನಗಳು ಬುಕ್ ಆಗಿರುವ ಬಗ್ಗೆ ವರದಿಯಾಗಿದೆ. ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ರಾಜಕಾರಣಿಗಳು ಹೊರ ರಾಜ್ಯಗಳಿಂದೂ ಹೆಲಿಕಾಪ್ಟರ್‌ಗಳನ್ನು ಬಾಡಿಗೆ ರೂಪದಲ್ಲಿ ಪಡೆಯುತ್ತಿದ್ದಾರೆ.

 

ಕರ್ನಾಟಕದ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ, ಜೈಪುರ, ದಿಲ್ಲಿ, ಕೋಲ್ಕತ್ತಾದಂತಹ ಭಾಗದಿಂದಲೂ ಹೆಲಿಕಾಪ್ಟರ್‌ಗಳು ಕರ್ನಾಟಕಕ್ಕೆ ಬಂದಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಇರಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್‌, ಮಿನಿ ವಿಮಾನಗಳಿಗೆ ದಿಢೀರ್‌ ಬೇಡಿಕೆ ಹೆಚ್ಚಾಗಿದ್ದರಿಂದ ಇವುಗಳ ಬಾಡಿಗೆ ಶೇ.15ರಷ್ಟು ಹೆಚ್ಚಳವಾಗಿದೆ.

 

ಕರ್ನಾಟಕದಲ್ಲಿ ಜಿಎಂಪಿ ಹಾಗೂ ಡೆಕ್ಕನ್‌ ಏರ್‌ಲೈನ್ಸ್‌ ಕಂಪನಿಗಳು ರಾಜಕೀಯ ನಾಯಕರಿಗೆ ಹೆಲಿಕಾಪ್ಟರ್‌ಗಳನ್ನು ಬಾಡಿಗೆ ಕೊಡುತ್ತಿವೆ. ರಾಜ್ಯದಲ್ಲಿ ಮಿನಿ ವಿಮಾನಗಳಿಗಿಂತ ಹೆಲಿಕಾಪ್ಟರ್‌ಗಳ ಬಳಕೆ ಹೆಚ್ಚಿದೆ.ಆದರೆ, ದಿಲ್ಲಿಯಿಂದ ಬರುವ ನಾಯಕರಿಗೆ ಹೆಲಿಕಾಪ್ಟರ್‌ ಬದಲು ಮಿನಿ ಏರ್‌ಕ್ರಾಪ್ಟ್‌ ಬಳಸಲಾಗುತ್ತಿದೆ.

ಬಾಡಿಗೆಎಷ್ಟು?

  • 2 ಆಸನದ ಕಾಪ್ಟರ್‌: 2.10 ಲಕ್ಷ ರೂ.
  • 4 ಆಸನದ ಕಾಪ್ಟರ್‌: 2.30 ಲಕ್ಷ ರೂ.
  • 6 ಆಸನದ ಮಿನಿ ವಿಮಾನ: 2.60 ಲಕ್ಷ ರೂ.
  • 8 ಆಸನದ ಮಿನಿ ವಿಮಾನ: 3.50 ಲಕ್ಷ ರೂ.
  • 13 ಆಸನದ ಮಿನಿ ವಿಮಾನ: 4 ಲಕ್ಷ ರೂ.
  • 15 ಆಸನದ ಮಿನಿ ವಿಮಾನ: 5 ಲಕ್ಷ ರೂ.

ಪಾರ್ಕಿಂಗ್‌ ದರವೂ ದುಬಾರಿ!

ಬಾಡಿಗೆ ಹೆಲಿಕಾಪ್ಟರ್‌ಗಳನ್ನು ಬೆಂಗಳೂರಿನ ಎಚ್‌ಎಎಲ್‌, ಜಕ್ಕೂರು, ವೈಟ್‌ಫೀಲ್ಡ್‌, ಬೀದರ್‌, ಬೆಳಗಾವಿಗಳ ಏರ್‌ಪೋರ್ಟ್‌ ಮತ್ತು ಹೆಲಿಪ್ಯಾಡ್‌ಗಳಲ್ಲಿ ನಿಲುಗಡೆ ಮಾಡಲಾಗಿದೆ. ಇಲ್ಲಿ ಪಾರ್ಕ್‌ ಮಾಡಿರುವ ಹೆಲಿಕಾಪ್ಟರ್‌ ಮತ್ತು ಮಿನಿ ವಿಮಾನಗಳಿಗೆ 8 ಗಂಟೆಯ ಅವಧಿಗೆ 20 ಸಾವಿರ ರೂ. ದರವನ್ನು ನಿಗದಿಪಡಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗಳಲ್ಲಿ 8 ಗಂಟೆಯ ಅವಧಿಗೆ 50 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಹೆಲಿಕಾಪ್ಟರ್‌, ಮಿನಿ ವಿಮಾನಗಳ ಪಾರ್ಕಿಂಗ್‌ ದರವನ್ನು ಕೂಡ ಬಾಡಿಗೆದಾರರೇ ಪ್ರತ್ಯೇಕವಾಗಿ ಪಾವತಿಸಬೇಕಾಗಿದೆ.

ಹಿಂದಿನ ಲೇಖನಮುಸ್ಲಿಂ ಮೀಸಲಾತಿ ರದ್ಧತಿಗೆ ತಡೆ; ಮಧ್ಯಂತರ ಆದೇಶ ವಿಸ್ತರಿಸಿದ ಸುಪ್ರೀಂ ಕೋರ್ಟ್
ಮುಂದಿನ ಲೇಖನಮತ ಚಲಾಯಿಸಲು ಗೋವಾದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಸಾವಿರಾರು ಕಾರ್ಮಿಕರು: ಬೆಳಗಾವಿ ಗಡಿಯಲ್ಲಿ ಕಟ್ಟೆಚ್ಚರ