ಮೈಸೂರು(Mysuru): ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಯನ ವಿಭಾಗದ 9 ವಿದ್ಯಾರ್ಥಿಗಳ ಹಾಜರಾತಿಯು ಶೇ 75ಕ್ಕಿಂತ ಕಡಿಮೆ ಇದ್ದರೂ ಪರೀಕ್ಷೆಗೆ ಅವಕಾಶ ನೀಡುವಂತೆ ಕೋರಿರುವ ಆ ವಿಭಾಗದ ಅಧ್ಯಕ್ಷ(ಮುಖ್ಯಸ್ಥ)ರನ್ನು ಅಮಾನತುಗೊಳಿಸುವಂತೆ ಶಿಕ್ಷಣ ಮಂಡಳಿ ಸದಸ್ಯರು ಒತ್ತಾಯಿಸಿದರು.
ಇಲ್ಲಿ ಶುಕ್ರವಾರ ನಡೆದ 2ನೇ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿದ್ದ ವಿಷಯ ಪ್ರಸ್ತಾಪಿಸಿದ ಸದಸ್ಯರು, ಹಾಜರಾತಿ ವಿಷಯದಲ್ಲಿ ವಿಭಾಗದವರ ಲೋಪ ಎದ್ದು ಕಾಣುತ್ತಿದೆ. ಗೈರು ಹಾಜರಾದವರಿಗೆ ಅವಕಾಶ ಕೊಡುತ್ತಾ ಹೋದರೆ ಗುಣಮಟ್ಟ ಏನಾಗಬಹುದು? ಆದ್ದರಿಂದ, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಎಲ್ಲ ವಿಭಾಗದವರೂ ಕೊನೆ ಕ್ಷಣದಲ್ಲಿ ತಮಗೆ ಬೇಕಾದವರಿಗೆ ಪರೀಕ್ಷೆಗೆ ಅವಕಾಶ ಕೊಡಿಸುತ್ತಾರೆ ಎಂದರು.
ಈ ವಿಷಯದಲ್ಲಿ ಪತ್ರಿಕೋದ್ಯಮ ವಿಭಾಗವು ಲೋಪ ಎಸಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ಇದಕ್ಕೊಂದು ಸಮಿತಿ ರಚಿಸಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮರುಕಳಿಸದಂತೆ ನೋಡಿಕೊಳ್ಳುವಂತೆ ಎಲ್ಲ ವಿಭಾಗಗಳಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೆರೆಯ ಜಿಲ್ಲೆಗಳಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯಗಳು ಆರಂಭಗೊಳ್ಳುತ್ತಿರುವುದರಿಂದಾಗಿ, ಮಾನಸ ಗಂಗೋತ್ರಿಯಲ್ಲಿ ಪದವಿ ಕೋರ್ಸ್‌ಗಳನ್ನು ಆರಂಭಿಸುವಂತೆ 12 ವಿಭಾಗಗಳಿಗೆ ಈಗಾಗಲೇ ಸೂಚಿಸಲಾಗಿದೆ.
– ಪ್ರೊ.ಜಿ.ಹೇಮಂತ್ ಕುಮಾರ್ , ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯದ
ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ಸ್ಥಾಪನೆ ಸಂಬಂಧ ಕರಡು ಅಧಿನಿಯಮಕ್ಕೆ ಅನುಮೋದನೆ ನೀಡಲಾಯಿತು. ಇದಕ್ಕೆ ರಾಜ್ಯಪಾಲರ ಅನುಮೋದನೆ ಕಲ್ಪಿಸಲು ಕೋರಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕುಲಪತಿ ಹೇಮಂತ್‌ಕುಮಾರ್ ತಿಳಿಸಿದರು.
ವಿವಿಧ ನಿಕಾಯಗಳು, ಎನ್‌ಇಪಿ ಪ್ರಕಾರ 3 ಹಾಗೂ 4ನೇ ಸೆಮಿಸ್ಟರ್‌ಗೆ ರೂಪಿಸಿರುವ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಸಭೆಯು ಅನುಮೋದನೆ ನೀಡಿತು.ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾಯಂಗೆ ಸರ್ಕಾರಕ್ಕೆ ಕಳುಹಿಸುವುದಕ್ಕೆ ಅನುಮೋದನೆ ಪಡೆಯಲಾಯಿತು. ವೇತನವನ್ನು ಯುಜಿಸಿಯೇ ನೇರವಾಗಿ ಪಾವತಿಸುವುದರಿಂದ ವಿ.ವಿಗೆ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಕುಲಪತಿ ಸ್ಪಷ್ಟಪಡಿಸಿದರು.