ಮನೆ ರಾಜ್ಯ ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

0

ರಾಯಚೂರು: ಕರ್ನಾಟಕ ರಾಜ್ಯದಿಂದ ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಣೆ ಮಾಡಲು ಅಲ್ಲಿನ ಸರ್ಕಾರ ವಿಧಿಸುತ್ತಿರುವ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಕೃಷ್ಣ ಸೇತುವೆ ಬಳಿ ರಸ್ತೆ ಸಂಚಾರ ತಡೆದು ಗುರುವಾರ (ಡಿ.19) ಪ್ರತಿಭಟನೆ ನಡೆಸಿದರು.

Join Our Whatsapp Group

ತೆಲಂಗಾಣ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತೆಲಂಗಾಣದಲ್ಲಿ ಭತ್ತಕ್ಕೆ ಕ್ವಿಂಟಲ್ ಗೆ 2500 ರೂ. ಹಾಗೂ 500 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಭತ್ತಕ್ಕೆ 2100 ರೂ.ಗಿಂತ ಕಡಿಮೆ ದರ ನಿಗದಿಯಾಗಿದ್ದು, ರೈತರು ತೆಲಂಗಾಣ, ಆಂಧ್ರದತ್ತ ಸಾಗುತ್ತಿದ್ದಾರೆ. ಆದರೆ, ಶಕ್ತಿನಗರ ಚೆಕ್‌ಪೋಸ್ಟನಲ್ಲಿ ಹಾಗೂ ಯಾದಗಿರಿ ಜಿಲ್ಲೆಯ ಜಲಾಲ್‌ಪುರ ಚೆಕ್ ಪೋಸ್ಟ್ ನಲ್ಲಿ ಭತ್ತದ ಗಾಡಿಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ.

ಈಗಾಗಲೇ ಎರಡು ದಿನಗಳ ಹಿಂದೆ ಸುಮಾರು 5ರಿಂದ 6 ಲಾರಿಗಳನ್ನು ನಿಲ್ಲಿಸಿ ಕೃಷ್ಣ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ ಹಿನ್ನೆಲೆಯಲ್ಲಿ ರೈತರಿಗೆ ಭತ್ತದ ಸಾಗಣೆ ತೊಂದರೆಯಾಗಿದೆ. ಪ್ರತಿದಿನ ತೆಲಂಗಾಣ ರಾಜ್ಯದಿಂದ ರಾಯಚೂರು ಮಾರುಕಟ್ಟೆಗೆ 30ರಿಂದ 40 ಸಾವಿರ ಭತ್ತವೂ ಯಾವುದೇ ನಿರ್ಬಂಧವಿಲ್ಲದೆ ಆವಕವಾಗುತ್ತಿವೆ. ಇದರಿಂದ ಸ್ಥಳೀಯ ಮಾರುಕಟ್ಟೆಯ ಭತ್ತದ ದರ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ.

ಆದರೆ, ಕರ್ನಾಟಕದ ರೈತರು ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಿಸಲು ಮುಂದಾದರೆ ತಡೆಯುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ರಾಜ್ಯ ಗೌರಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್, ಸದಸ್ಯರಾದ ಮಲ್ಲಣ್ಣ ಗೌಡೂರು, ಮಲ್ಲಿಕಾರ್ಜುನ ರಾವ್, ವ್ಯಾಪಾರಿ ವೆಂಕಟೇಶ ಸೇರಿ ಅನೆಕರಿದ್ದರು.