ಮೈಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಕಾಲೇಜು ಸೇರ್ಪಡೆ ಸಮಯದಲ್ಲಿ ಕಾಲೇಜು ಶುಲ್ಕ ಪಾವತಿಸಲು ವಿದ್ಯಾರ್ಥಿಗಳಿಗೆ ಒತ್ತಾಯ ಮಾಡದಂತೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಇಂದು ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ನಗರದ ಡಾ.ಬಾಬು ಜಗಜೀವನರ್ ರಾಮ್ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ದಾಖಲಾತಿಯಾಗಲು ಅರ್ಹತೆಯನ್ನು ಹೊಂದಿದ್ದರೆ ದಾಖಲಾತಿ ಸಮಯದಲ್ಲಿ ಅವರಿಗೆ ದಾಖಲಾತಿ ಶುಲ್ಕ ಪಾವತಿ ಮಾಡಲು ಒತ್ತಾಯ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಬಾರದು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದ ನಂತರ 7 ದಿನಗಳೊಳಗಾಗಿ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿಸಬೇಕೆಂದು ಸರ್ಕಾರಿ ಆದೇಶವಿದೆ. ಆದರೆ ಅರ್ಹತೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳ ಆಡಳಿತ ಮಂಡಳಿಗಳು ದಾಖಲಾತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಮೊದಲು ಎಸ್ ಎಸ್ ಪಿ ಜಾರಿ ಬರುವ ಮೊದಲು ವಿದ್ಯಾರ್ಥಿ ವೇತನ ನೇರವಾಗಿ ಕಾಲೇಜು ಆಡಳಿತ ಮಂಡಳಿಗೆ ಪಾವತಿ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ದಾಖಲಾತಿ ಶುಲ್ಕ ಕಟ್ಟುವಂತೆ ಒತ್ತಾಯಿಸುತ್ತಿರಲಿಲ್ಲ. ಆದರೆ ಎಸ್ ಎಸ್ ಪಿ ಜಾರಿಗೆ ಬಂದ ನಂತರ ಡಿಬಿಟಿ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ವಿದ್ಯಾರ್ಥಿ ವೇತನ ಪಾವತಿಯಾಗುತ್ತಿರುವ ಕಾರಣ ಕಾಲೇಜು ಆಡಳಿತ ಮಂಡಳಿ ದಾಖಲಾತಿ ಸಮಯದಲ್ಲೇ ಶುಲ್ಕ ಪಾವತಿಗೆ ಒತ್ತಾಯ ಮಾಡುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಪ್ರಥಮ ವರ್ಷದ ಪದವಿಯ ದಾಖಲಾತಿ ಪ್ರಾರಂಭವಾಗಿದ್ದು, ಅರ್ಹತೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ದಾಖಲಾತಿ ಶುಲ್ಕ ಕಟ್ಟದಿದ್ದರೆ ದಾಖಲಾತಿ ನೀಡುತ್ತಿಲ್ಲ. ಇದರಿಂದ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ದಾಖಲಾತಿ ಸಮಯದಲ್ಲಿ ಶುಲ್ಕ ಪಾವತಿಗೆ ಒತ್ತಾಯ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಫೆಡರೇಷನ್ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅಭಿ ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.