ನವದೆಹಲಿ: ಉತ್ತರ ಭಾರತದಲ್ಲಿ ತೀವ್ರ ಚಳಿ ವಾತಾವರಣ ಮುಂದುವರಿದಿರುವ ನಡುವೆಯೇ ಶುಕ್ರವಾರ (ಜನವರಿ 10) ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಮಂಜು ಮುಸುಕಿದ ವಾತಾವರಣದಿಂದಾಗಿ ಎದುರಿನ ರಸ್ತೆಯೇ ಕಾಣಿಸದಂತಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಅಲ್ಲದೇ ಝೀರೋ ವಿಸಿಬಿಲಿಟಿಯಿಂದಾಗಿ 270ಕ್ಕೂ ಅಧಿಕ ವಿಮಾನಗಳು ನಿಲ್ದಾಣಕ್ಕೆ ವಿಳಂಬವಾಗಿ ಆಗಮಿಸಿರುವುದಾಗಿ ವರದಿ ತಿಳಿಸಿದೆ.
ದಟ್ಟ ಮಂಜು ಕವಿದ ವಾತಾವರಣದಿಂದ ವಿಮಾನ, ರೈಲು ಸಂಚಾರ ಹಾಗೂ ವಾಹನ ಸವಾರರ ಮೇಲೆ ಪರಿಣಾಮ ಬೀರಿರುವುದಾಗಿ ವರದಿ ವಿವರಿಸಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ದಾಖಲೆ ಪ್ರಮಾಣ ಝೀರೋ ವಿಸಿಬಿಲಿಟಿ ದಾಖಲಾಗಿತ್ತು.
ದಟ್ಟ ಮಂಜು ಕವಿದ ವಾತಾವರಣದ ಜತೆಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ 200ಕ್ಕೂ ಅಧಿಕ ವಿಮಾನಗಳು ವಿಳಂಬವಾಗಿದ್ದು, 5 ವಿಮಾನ ಸಂಚಾರ ರದ್ದುಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ವಾತಾವರಣದಿಂದಾಗಿ ವಿಮಾನ ನಿಲ್ದಾನ, ರಸ್ತೆ ಹಾಗೂ ರೈಲು ಸಂಚಾರದ ಮಾರ್ಗದ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಸಂಚಾರ ವಿಳಂಬವಾಗಲಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಕೂಡಾ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.