ಮನೆ ಅಂತಾರಾಷ್ಟ್ರೀಯ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪಾಕ್ ಪ್ರಜೆಗಳ ಗಡೀಪಾರು : 55,000 ಮಂದಿಗಿಲ್ಲ ಗಡೀಪಾರಿನ ಆತಂಕ!

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪಾಕ್ ಪ್ರಜೆಗಳ ಗಡೀಪಾರು : 55,000 ಮಂದಿಗಿಲ್ಲ ಗಡೀಪಾರಿನ ಆತಂಕ!

0

ದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯಾನಕ ಉಗ್ರ ದಾಳಿ ದೇಶದ ಭದ್ರತೆಯ ಮೇಲೆ ಮಹತ್ತ್ವದ ಪ್ರಶ್ನೆಗಳನ್ನು ಎಬ್ಬಿಸಿದ ನಂತರ, ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ತನ್ನ ನಿಲುವನ್ನು ಕಠಿಣಗೊಳಿಸಿದೆ. ಉಗ್ರ ದಾಳಿಯ ಬೆನ್ನಲ್ಲೇ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡ ಭಾರತ, ಇದೀಗ ದೇಶದಲ್ಲಿ ಇರುವ ಪಾಕ್ ಪ್ರಜೆಗಳನ್ನು ಗಡೀಪಾರು ಮಾಡುವ ಕ್ರಮಕ್ಕೆ ಕೈಹಾಕಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ನೀಡಲಾಗಿದ್ದ 14 ರೀತಿಯ ವೀಸಾಗಳನ್ನು ರದ್ದುಪಡಿಸಿದ್ದು, ಅಲ್ಪಾವಧಿ ವೀಸಾ ಹೊಂದಿರುವವರಿಗೆ 48 ಗಂಟೆಗಳ ಒಳಗಾಗಿ ಭಾರತ ಬಿಟ್ಟು ಹೋಗುವ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಇದರಂತೆ ಹಲವು ರಾಜ್ಯಗಳು ತಕ್ಷಣ ಕ್ರಮ ಕೈಗೊಂಡು ಈ ಪಾಕ್ ಪ್ರಜೆಗಳನ್ನು ಗಡೀಪಾರುಗೊಳಿಸಿರುವುದು ತಿಳಿದುಬಂದಿದೆ.

ಆದರೆ, ಇಂದಿಗೂ ದೇಶದೊಳಗೆ ಸುಮಾರು 55,000 ಪಾಕಿಸ್ತಾನ ಪ್ರಜೆಗಳು ಉಳಿದಿದ್ದಾರೆ. ಇವರಲ್ಲಿ ಬಹುಪಾಲು ಜನ ದೀರ್ಘಾವಧಿ ವೀಸಾ ಹೊಂದಿರುವವರು. ವಿಶೇಷವಾಗಿ, 54,000 ಕ್ಕೂ ಅಧಿಕ ಮಂದಿ ರಾಜಸ್ಥಾನ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಈ ಪಾಕಿಸ್ತಾನ ಪ್ರಜೆಯರಲ್ಲಿ ಹೆಚ್ಚಿನವರು ಭಾರತೀಯರನ್ನು ವಿವಾಹವಾದ ಪಾಕಿಸ್ತಾನ ಮೂಲದ ಮಹಿಳೆಯರಾಗಿದ್ದಾರೆ. ಗಡಿಭಾಗದ ಹಳ್ಳಿಗಳಲ್ಲಿ ಪಾಕಿಸ್ತಾನದಿಂದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಳ್ಳುವ ಸಂಸ್ಕೃತಿ ಇನ್ನೂ ಮುಂದುವರಿದಿದೆ. ಹೀಗಾಗಿ ದೀರ್ಘಾವಧಿ ವೀಸಾ ಹೊಂದಿದ ಪಾಕ್ ಪ್ರಜೆಗಳ ಗಡೀಪಾರು ಮಾಡಲು ಕಾನೂನು ತೊಡಕು ಉಂಟಾಗಿದೆ.

ಈ ನಡುವೆ, ಪಹಲ್ಗಾಮ್ ದಾಳಿಯ ನಂತರ ದೇಶಾದ್ಯಂತ ಭದ್ರತಾ ಎಚ್ಚರಿಕೆ ಹೆಚ್ಚಳಗೊಂಡಿದ್ದು, ಗಡಿಭಾಗಗಳಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ. ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿರುವ ಭಾರತ, ಪಾಕ್ ಮೂಲದ ಎಲ್ಲಾ ಪ್ರಜೆಗಳ ಕುರಿತು ಮರುಪರಿಶೀಲನೆಗೆ ಮುಂದಾಗಿದೆ.