ವಯಸ್ಕರು ಇರುವ ಜೈಲುಗಳಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಇರಿಸುವುದು ಅವರ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
[ವಿನೋದ್ ಕತಾರಾ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ವೈಯಕ್ತಿಕ ಸ್ವಾತಂತ್ರ್ಯ ಎಂಬುದು “ರಾಷ್ಟ್ರೀಯ ನ್ಯಾಯಾಲಯಗಳು ಸಾಧಿಸಬೇಕಾದ” ಹಳೆಯ ಪರಿಕಲ್ಪನೆಗಳಲ್ಲಿ ಒಂದಾಗಿದೆ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಒತ್ತಿಹೇಳಿತು.
ಕಾನೂನು ನೆರವು ಎನ್ನುವುದು ವ್ಯವಸ್ಥೆಯ ಅಡೆತಡೆಗಳಲ್ಲಿ ಸಿಲುಕಿರುವ ಕಾರಣಕ್ಕೆ ತಡವಾದ ಹಂತದಲ್ಲಿ ಕೂಡ ತಾನು ಬಾಲಾಪರಾಧಿ ಎಂಬ ಹಕ್ಕನ್ನು ಆರೋಪಿ ಎತ್ತಲು ಸಾಧ್ಯವಾಗಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯವು ಗಮನಿಸಿತು.
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೊಲೆ ಅಪರಾಧಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಘಟನೆ ನಡೆದ ಸಮಯದಲ್ಲಿ ತನಗೆ 14 ವರ್ಷ ವಯಸ್ಸಾಗಿದ್ದು ತನ್ನ ನಿಖರ ವಯಸ್ಸು ಪರಿಶೀಲಿಸುವಂತೆ ಉತ್ತರ ಪ್ರದೇಶ (ಯುಪಿ) ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆತ ಕೋರಿದ್ದ.
ಅರ್ಜಿದಾರರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ 2016ರಲ್ಲಿ ಎತ್ತಿಹಿಡಿದಿತ್ತು. ಆದರೆ, ತಾನು ಆ ಸಮಯದಲ್ಲಿ ಬಾಲಾಪರಾಧದ ವಿಚಾರ ಪ್ರಸ್ತಾಪಿಸಿರಲಿಲ್ಲ. ಅರ್ಜಿದಾರರು ನಂತರ ರಾಜ್ಯ ವೈದ್ಯಕೀಯ ಮಂಡಳಿ ಸೂಚಿಸಿದಂತೆ ವಯಸ್ಸಿನ ನಿರ್ಣಯ ಪರೀಕ್ಷೆಗೆ ಒಳಗಾಗಿದ್ದರು. ಆದರೆ ಅದು ಕೂಡ ಆತನ ವಯಸ್ಸನ್ನು ದೃಢೀಕರಿಸಲಿಲ್ಲ. ಬಳಿಕ ಕುಟುಂಬ ನೋಂದಣಿ ದಾಖಲೆ ತೆಗೆಸಿ ನೋಡಿದಾಗ ಆತನಿಗೆ ಘಟನೆ ನಡೆದ ಸಮಯದಲ್ಲಿ 14 ವರ್ಷವಾಗಿರುವುದು ತಾಳೆಯಾಗಿತ್ತು.
ಪ್ರಮುಖ ಅವಲೋಕನಗಳು
ವಯಸ್ಕ ಅಪರಾಧ ನ್ಯಾಯ ವ್ಯವಸ್ಥೆಯ ಜಾಲದಲ್ಲಿ ಒಮ್ಮೆ ಮಗು ಸಿಕ್ಕಿಬಿದ್ದರೆ, ಅದರಿಂದ ಹೊರಬರುವುದು ಕಷ್ಟ.
ಬಾಲಾಪರಾಧಿ ನ್ಯಾಯ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳಲ್ಲಿ ಮಗುವಿನ ಹಕ್ಕುಗಳು ಮತ್ತು ಪರಸ್ಪರ ಸಂಬಂಧಿತ ಕರ್ತವ್ಯಗಳ ಬಗ್ಗೆ ಅರಿವು ಕಡಿಮೆ ಇರುತ್ತದೆ.
ನಿಗದಿತ ವಯಸ್ಸಿಗಿಂತ ಒಂದೋ ಎರಡೋ ವರ್ಷ ಅಪರಾಧಿ ದೊಡ್ಡವನಿರಬಹುದು ಎಂದು ಮುಖ್ಯೋಪಾಧ್ಯಾಯರು ಹೇಳಿರುವ ಮಾತ್ರಕ್ಕೆ ಆತ ಬಾಲಾಪರಾಧಿಯಲ್ಲ ಎಂದು ನಿರ್ಣಯಕ್ಕೆ ಬರಲು ಆಧಾರವಾಗುವುದಿಲ್ಲ.
ಬಾಲಾಪರಾಧಿಯ ವಯಸ್ಸನ್ನು ನಿರ್ಧರಿಸುವಲ್ಲಿ ದಾಖಲೆಯಲ್ಲಿ ದೊರೆಯುವ ಸಾಕ್ಷ್ಯ ಪ್ರಮುಖ ಪಾತ್ರ ವಹಿಸುತ್ತದೆ.
ಈ ಪ್ರಕರಣವನ್ನು ಸುದೀರ್ಘವಾಗಿ ಆಲಿಸಿದ ದ್ವಿಸದಸ್ಯ ಪೀಠವು, ಅರ್ಜಿದಾರರನ್ನು ಮೂಳೆ ಬೆಳವಣಿಗೆ ಪರೀಕ್ಷೆಗೆ ಅಥವಾ ಯಾವುದೇ ನೂತನವಾದ ವಯಸ್ಸು ನಿರ್ಣಯ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿತು. ಪರೀಕ್ಷೆಯನ್ನು ಮೂವರು ವೈದ್ಯರ ತಂಡ ನಡೆಸಬೇಕು ಅವರಲ್ಲಿ ಒಬ್ಬರು ವಿಕಿರಣ ಶಾಸ್ತ್ರ ವಿಭಾಗಕ್ಕೆ ಸೇರಿದವರಾಗಿರಬೇಕು ಎಂದು ನ್ಯಾಯಾಲಯ ತಿಳಿಸಿತು.
ಅರ್ಜಿದಾರ ಬಾಲಾಪರಾಧಿಯೇ ಎಂಬುದನ್ನು ಒಂದು ತಿಂಗಳಲ್ಲಿ ಪರಿಶೀಲಿಸುವಂತೆಯೂ ಆಗ್ರಾದ ಸೆಷನ್ಸ್ ನ್ಯಾಯಾಲಯಕ್ಕೆ ಪೀಠ ಸೂಚಿಸಿತು. ಅಲ್ಲದೆ ವಯಸ್ಸು ನಿರ್ಧರಿಸಲು ಮೂಳೆ ಬೆಳವಣಿಗೆ ಪರೀಕ್ಷಾ ವರದಿ ಸಂಪೂರ್ಣ ಸಹಕಾರಿಯಾಗಿರುವುದಿಲ್ಲ ಎಂಬ ಕಾರಣಕ್ಕೆ ಕುಟುಂಬ ನೋಂದಣಿ ದಾಖಲಾತಿ ಪ್ರಮುಖ ಪಾತ್ರ ವಹಿಸಲಿದ್ದು ಅದರ ನೈಜತೆಯನ್ನು ಪರಿಶೀಲಿಸಿ ತಿಂಗಳೊಳಗೆ ವರದಿ ಸಲ್ಲಿಸುವಂತೆಯೂ ಕೆಳ ನ್ಯಾಯಾಲಯಕ್ಕೆ ತಿಳಿಸಿತು.