ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದ ವಿಧಾನ ಸಭೆಯ ಉಪಸಭಾಪತಿ ಹಾಗೂ ಹಾವೇರಿ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಶುಕ್ರವಾರ ಬೈಕ್ ಡಿಕ್ಕಿ ಹೊಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು, ರುದ್ರಪ್ಪ ಲಮಾಣಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿಂದ ಹಾವೇರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಮೂತ್ರ ವಿಸರ್ಜನೆಗಾಗಿ ಕಾರಿಂದ ಕೆಳಗಿಳಿದು ನಿಂತಿದ್ದ ರುದ್ರಪ್ಪ ಲಮಾಣಿ ಅವರಿಗೆ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ರುದ್ರಪ್ಪ ಲಮಾಣಿ ಅವರು ನೆಲಕ್ಕೆ ಬಿದ್ದ ಪರಿಣಾಮ ಅವರ ಹಣೆ, ಹಲ್ಲು ಮತ್ತು ಬಲ ಮೊಣಕಾಲಿಗೆ ಗಾಯಗಳಾಗಿವೆ. ತಕ್ಷಣಕ್ಕೆ ಹಿರಿಯೂರಲ್ಲಿ ಚಿಕಿತ್ಸೆ ಪಡೆದ ಅವರು, ಬಳಿಕ ದಾವಣಗೆರೆ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ಸ್ಥಳಕ್ಕೆ ಹಿರಿಯೂರು ಡಿವೈಎಸ್ಪಿ ಶಿವಕುಮಾರ್ ಹಾಗೂ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














