ಮನೆ ರಾಜ್ಯ ಮೌಲ್ಯಮಾಪನದಲ್ಲಿ ಕರ್ತವ್ಯಲೋಪ: 9 ಉಪನ್ಯಾಸಕರು ಅಮಾನತು

ಮೌಲ್ಯಮಾಪನದಲ್ಲಿ ಕರ್ತವ್ಯಲೋಪ: 9 ಉಪನ್ಯಾಸಕರು ಅಮಾನತು

0

ಬೆಂಗಳೂರು(Bengaluru): ಇದೇ ಏಪ್ರಿಲ್‌– ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪಕ, ಸಹಾಯಕ ಮೌಲ್ಯ ಮಾಪಕ, ಉಪ ಮುಖ್ಯಮೌಲ್ಯ ಮಾಪಕ, ಮರು ಮೌಲ್ಯಮಾಪಕರಾಗಿದ್ದ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ 9 ಉಪನ್ಯಾಸಕರನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.

ವಿದ್ಯಾರ್ಥಿಯೊಬ್ಬರ ಭೌತವಿಜ್ಞಾನ ವಿಷಯದ ಉತ್ತರ ಪತ್ರಿಕೆಯ ಕೊನೆಯ 7 ಪುಟಗಳನ್ನು ಮರು ಮೌಲ್ಯಮಾಪನ ಮಾಡಿಲ್ಲ ಎಂಬ ಆರೋಪದಲ್ಲಿ, ಆ ವಿಷಯದ ಉಪನ್ಯಾಸಕರಾದ ಕರೂರು ಪ್ರಕಾಶ್‌, ಬಿ.ಪಿ. ಕಲ್ಲಪ್ಪ, ಎಂ.ಚಂದ್ರಶೇಖರ್‌, ಉಪಮುಖ್ಯ ಮೌಲ್ಯಮಾಪಕರಾಗಿದ್ದ ಎಂ. ಶಂಕರಪ್ಪ ಎಂಬುವರನ್ನು ಇಲಾಖೆಯ ನಿರ್ದೇಶಕ ಆರ್‌. ರಾಮಚಂದ್ರನ್‌ ಅಮಾನತು ಮಾಡಿದ್ದಾರೆ.

ಅದೇ ಉತ್ತರ ಪತ್ರಿಕೆಗೆ ಸಹಾಯಕ ಮೌಲ್ಯಮಾಪಕರಾಗಿದ್ದ ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಎಂ.ಪಿ. ಶ್ರುತಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡು, ಆ ಬಗ್ಗೆ 15 ದಿನಗಳ ಒಳಗೆ ವರದಿ ನೀಡು ವಂತೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿಯ ಇಂಗ್ಲಿಷ್‌ ವಿಷಯದ ಉತ್ತರ ಪತ್ರಿಕೆಯ ಕೊನೆಯ ಒಂಬತ್ತು ಪುಟಗಳನ್ನು ಮೌಲ್ಯಮಾಪನ ಮಾಡಿಲ್ಲ ಎಂಬ ಆರೋಪದಲ್ಲಿ ಮೌಲ್ಯಮಾಪಕರಾಗಿದ್ದ ಬಸವರಾಜು ನಾಗನಾಥ, ಉಪ ಮುಖ್ಯ ಮೌಲ್ಯಮಾಪ ಕರಾಗಿದ್ದ ಪೋಲಾರ್‌ ಸಿದ್ಧರಾಮ್‌ ಚಂದ್ರಮ್‌, ಮರು ಮೌಲ್ಯಮಾಪಕ ರಾಗಿದ್ದ ಡಿ.ಎ. ಯಾಸ್ಮಿನ್ ಜಹಾ, ಪಿ. ಕರೇಗೌಡ, ಎಸ್‌.ಸಿ. ದಯಾನಂದ ಎಂಬ ಐವರು ಉಪನ್ಯಾಸಕರನ್ನು ಆರ್‌. ರಾಮಚಂದ್ರನ್‌ ಅವರು ಅಮಾನತು ಮಾಡಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಇಲಾಖೆಯ ನಿರ್ದೇಶಕರೇ ಶಿಸ್ತು ಪ್ರಾಧಿಕಾರಿ. ಹೀಗಾಗಿ, ಅವರು ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಈ ಕಾಲೇಜುಗಳ ಉಪನ್ಯಾಸಕರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದರು. ಅದಕ್ಕೆ ಉಪನ್ಯಾಸಕರು ಲಿಖಿತ ಸಮಜಾಯಿಷಿಯನ್ನೂ ನೀಡಿದ್ದರು. ಆದರೆ, ಅದನ್ನು ಒಪ್ಪದೆ, ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಇದೇ ಆರೋಪ ಎದುರಿಸುತ್ತಿರುವ ಶ್ರುತಿ ಅವರು ಖಾಸಗಿ ಅನುದಾನರಹಿತ ಕಾಲೇಜಿನ ಉಪನ್ಯಾಸಕಿ. ಹೀಗಾಗಿ, ಸಂಸ್ಥೆಯ ಆಡಳಿತ ಮಂಡಳಿಗೆ ನೋಟಿಸ್‌ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಉಪನ್ಯಾಸಕರ ತಪ್ಪೇನು?: ಉತ್ತರಪತ್ರಿಕೆಯು ಒಟ್ಟು 44 ಪುಟಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಭೌತವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯದ ಉತ್ತರಪತ್ರಿಕೆಯಲ್ಲಿ ಮಧ್ಯದ ಕೆಲವು ಪುಟಗಳನ್ನು ಖಾಲಿ ಬಿಟ್ಟು, ನಂತರ ಪುಟಗಳಲ್ಲಿ ಉತ್ತರ ಬರೆದಿದ್ದರು. ಆದರೆ, ಆರಂಭದ ಪುಟಗಳನ್ನು ಮೌಲ್ಯಮಾಪನ ಮಾಡಿದ್ದ ಉಪನ್ಯಾಸಕರು, ಖಾಲಿ ಪುಟಗಳು ಕಾಣಿಸುತ್ತಲೇ ಮೌಲ್ಯಮಾಪನ ಕೊನೆಗೊಳಿಸಿದ್ದರು. ಅಲ್ಲದೆ, ನಂತರದ ಪುಟಗಳನ್ನು ತಿರುವಿ ಹಾಕಿಲ್ಲ. ಅದರಿಂದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ವ್ಯತ್ಯಾಸ ಆಗಿದೆ ಎಂದು ಆರೋಪಿಸಲಾಗಿದೆ.

ಅಮಾನತುಗೊಂಡ ಉಪನ್ಯಾಸಕರು

ಭೌತವಿಜ್ಞಾನ ಉಪನ್ಯಾಸಕರು

  • ಎಂ. ಶಂಕರಪ್ಪ;ಸರ್ಕಾರಿ ಪದವಿಪೂರ್ವ ಕಾಲೇಜು, 18ನೇ ಅಡ್ಡ ರಸ್ತೆ, ಮಲ್ಲೇಶ್ವರ
  • ಕರೂರು ಪ್ರಕಾಶ್‌;ಸರ್ಕಾರಿ ಪದವಿಪೂರ್ವ ಕಾಲೇಜು, ಮೊಳಕಾಲ್ಮೂರು, ಚಿತ್ರದುರ್ಗ
  • ಬಿ.ಪಿ. ಕಲ್ಲಪ್ಪ; ಸರ್ಕಾರಿ ಪದವಿಪೂರ್ವ ಕಾಲೇಜು ಬಳ್ಳಾರಿ
  • ಎಂ.ಚಂದ್ರಶೇಖರ್‌;ವಿಶ್ವ ಮಾನವ ಪದವಿಪೂರ್ವ ಕಾಲೇಜು, ನಾಗಮಂಗಲ, ಮಂಡ್ಯ.
  • ಎಂ.ಪಿ. ಶ್ರುತಿ;ಒಕ್ಕಲಿಗರ ಸಂಘದ ಪದವಿಪೂರ್ವ ಕಾಲೇಜು ಬೆಳಗೊಳ, ಮೂಡಿಗೆರೆ (ಖಾಸಗಿ ಅನುದಾನರಹಿತ)

ಇಂಗ್ಲಿಷ್‌ ಉಪನ್ಯಾಸಕರು

  • ಪೋಲಾರ್‌ ಸಿದ್ಧರಾಮ್‌ ಚಂದ್ರಮ್‌; ಸರ್ಕಾರಿ ಪದವಿಪೂರ್ವ ಕಾಲೇಜು, ರೇವಗಿ, ಚಿತ್ತಾಪುರ ತಾಲ್ಲೂಕು, ಕಲಬುರಗಿ
  • ಬಸವರಾಜು ನಾಗನಾಥ;ವಿವೇಕಾನಂದ ಪದವಿಪೂರ್ವ ಕಾಲೇಜು, ಬಸವಕಲ್ಯಾಣ, ಬೀದರ್‌
  • ಡಿ.ಎ. ಯಾಸ್ಮಿನ್ ಜಹಾ;ಸಿದ್ದಾರ್ಥ ಪದವಿಪೂರ್ವ ಕಾಲೇಜು, ಮಧುಗಿರಿ, ತುಮಕೂರು
  • ಪಿ. ಕರೇಗೌಡ;ಸುವರ್ಣಮುಖಿ ವಿದ್ಯಾಸಂಸ್ಥೆ, ಕಾವನದಾಲ, ಮಧುಗಿರಿ, ತುಮಕೂರು
  • ಎಸ್‌.ಸಿ. ದಯಾನಂದ;ಕನಕದಾಸ ಪದವಿಪೂರ್ವ ಕಾಲೇಜು, ಹುಳಿಯಾರು, ಚಿಕ್ಕನಾಯಕಹಳ್ಳಿ, ತುಮಕೂರು.