ಎಚ್.ಡಿ.ಕೋಟೆ: ಅಕ್ರಮ ಸಕ್ರಮ ಯೋಜನೆಯಡಿ ಕರ್ತವ್ಯಲೋಪ ಎಸೆಗಿರುವ ಆರೋಪದಡಿ ಕಂದಾಯ ನಿರೀಕ್ಷಕ ಮಹೇಶ್, ಎಫ್ ಡಿಎ ವಿಷ್ಣು, ಗ್ರಾಮ ಲೆಕ್ಕಿಗ ಅನಿಲ್, ಮುಜರಾಯಿ ಇಲಾಖೆ ಗುಮಾಸ್ತ ಹರೀಶ್ ಸೇರಿ ನಾಲ್ವರನ್ನ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅಮಾನತುಗೊಳಿಸಿದ್ದಾರೆ.
ಹುಣಸೂರು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಅವರು, ಹಿಂದಿನ ತಹಶೀಲ್ದಾರ್ ಕೆ.ಆರ್. ರತ್ನಾಂಬಿಕೆ, ಶಿರಸ್ತೇದಾರ್ ಕುಮಾರ್ ಸೇರಿ 6 ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದರು. ಆದರೆ, ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಿ ಗುರುವಾರ ನಾಲ್ವರನ್ನು ಅಮಾನತು ಪಡಿಸಿದ್ದಾರೆ.
ಪಟ್ಟಣದ ಕಂದಾಯ ಇಲಾಖೆಯ ಅಣ್ಣೂರಿನ ವ್ಯಾಪ್ತಿಯ ವಿಎ ಅನಿಲ್ ಕುಮಾರ್ ಮತ್ತು ಮುಜರಾಯಿ ಇಲಾಖೆಯ ಹರೀಶ್ ಅವರು ತಮ್ಮ ಪತ್ನಿ ಭವ್ಯ ಮತ್ತು ಸಂಬಂಧಿಕರಾದ ಸುಜಾತ ಅವರಿಗೆ ಪಡುಕೋಣೆ ಕವಲ್ ಸರ್ವೆ ನಂ. 53ರಲ್ಲಿ ಸುಮಾರು 5 ಎಕರೆ ಜಮೀನನ್ನು ಕಬಳಿಸಲು ಸಾಗುವಳಿ ಪತ್ರ ನೀಡಲು ನಕಲು ದಾಖಲಿ ಸೃಷ್ಟಿಸಿದ್ದಾರೆ. ಇದಕ್ಕೆ ಸಹಕರಿಸಿದ ತಹಶೀಲ್ದಾರ್ ರತ್ನಾಂಬಿಕೆ, ಸಿರಸ್ತೇದಾರ್ ಕುಮಾರ್, ಕಂದಾಯ ನಿರೀಕ್ಷಕ ಮಹೇಶ್, ಎಫ್ ಡಿಎ ವಿಷ್ಣು ಅವರು ಕರ್ತವ್ಯಲೋಪ ಎಸಗಿ ಭೂ ಹಗರಣ ನಡೆಸಿರುವುದನ್ನು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ತನಿಖೆ ನಡೆಸಿ, ಕಳೆದ ತಿಂಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.