ಮೈಸೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಕೆರೆ ಅಭಿವೃದ್ಧಿ, ರಸ್ತೆ, ಚರಂಡಿ, ಶಾಲಾಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಗೊಂಡು ಗ್ರಾಮದ ಅಭಿವೃದ್ಧಿಗೆ ಒತ್ತುನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮ ಪಂಚಾಯಿತಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಮಾತನಾಡಿದ ಅವರು, ಮ-ನರೇಗಾ ಅಕುಶಲ ಕೂಲಿಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಜಿಸುವಂತೆ ತಿಳಿಸಿದರು.
ಸ್ಥಳೀಯವಾಗಿ ದೊರೆಯುವ ಕಚ್ಛಾ ಉತ್ಪನ್ನಗಳಿಗೆ ಮೌಲ್ಯವರ್ಧನೆಗೊಳಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಸಹಕಾರ ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕ ಸಬಲೀಕರಣಗೊಳಿಸಲು ಸೂಚನೆ ನೀಡಿದರು. ನಂಜನಗೂಡಿನಲ್ಲಿ ಬಾಳೆಹಣ್ಣು ಹೆಚ್ಚಾಗಿ ಬೆಳೆಯುವ ಕಾರಣ, ಅದರಿಂದ ಬಾಳೆರಸ, ಬಾಳೆನಾರಿನಿಂದ ಬ್ಯಾಗ್ಸ್ ನಂತಹ ವಿವಿಧ ಉತ್ಪನ್ನಗಳು ಸೇರಿದಂತೆ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಸೂಕ್ತ ತರಬೇತಿ ನೀಡಲು ಸೂಚಿಸಿದರು.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ, ಶಾಲಾ ಮತ್ತು ಅಂಗನವಾಡಿ ಶೌಚಾಲಯ ನಿರ್ವಹಣೆ, ಬೂದು ನೀರು ಕಾಮಗಾರಿಯ ವೈಯಕ್ತಿಕ ಇಂಗು ಗುಂಡಿ, ಒಳಚರಂಡಿ ಸಂಸ್ಕರಣಾ ವಿಧಾನ (Inline treatment), ಹಸಿ ಮತ್ತು ಒಣ ಕಸ ನಿರ್ವಹಣೆ ಘಟಕವನ್ನು ತರಬೇತಿ ಪಡೆದ ಜಿಪಿಎಲ್ ಎಫ್ ಸದಸ್ಯರಿಗೆ ಹಸ್ತಾಂತರಿಸುವ ಬಗ್ಗೆ ಮಾಹಿತಿ ನೀಡಿದರು, ಮನೆ ಹಂತದಲ್ಲಿ ಮತ್ತು ಸಮುದಾಯ ಹಂತದಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದು ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಿಡಿಓ ಗೆ ಸೂಚಿಸಿದರು.
ಬಾಕಿ ವೇತನ, ಶೌಚಾಲಯ ನಿರ್ಮಾಣ, ವೈಯಕ್ತಿಕ ಕಾಮಗಾರಿಗಳ ಬಾಕಿ, ಸಾಮಾಗ್ರಿ ಮೊತ್ತ ಸೇರಿದಂತೆ ಸಂಬಂಧಪಟ್ಟಂತೆ ಹಲವು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಅವರು, ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ನಿರ್ಮಾಣವಾಗುತ್ತಿರುವ ಡಿಜಿಟಲ್ ಗ್ರಂಥಾಲಯ ಹಾಗೂ ಹಳೆ ಗ್ರಂಥಾಲಯ ಹಾಗೂ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕಕ್ಕರಹಟ್ಟಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗಳಿಗೂ ಅಳವಡಿಸಿರುವ ನಳಸಂಪರ್ಕ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಚರಿತ, ಸೇರಿದಂತೆ ಇತರರು ಹಾಜರಿದ್ದರು.