ಮನೆ ಅಪರಾಧ ದೇವರಾಜ ಮಾರುಕಟ್ಟೆ ಉಳಿವಿಗಾಗಿ  ಇಂದು ಪ್ರತಿಭಟನೆ

ದೇವರಾಜ ಮಾರುಕಟ್ಟೆ ಉಳಿವಿಗಾಗಿ  ಇಂದು ಪ್ರತಿಭಟನೆ

0

ಮೈಸೂರು: ದೇವರಾಜ ಮಾರುಕಟ್ಟೆ ಹೊಸದಾಗಿ ನಿರ್ಮಾಣಕ್ಕೆ ವಿರೋಧ ಹಿನ್ನೆಲೆ ಕಟ್ಟಡ ಉಳಿಸಿಕೊಂಡು ನವೀಕರಣ ಮಾಡುವಂತೆ ಒತ್ತಾಯ ಕೇಳಿ ಬಂದಿದ್ದು, ಮೈಸೂರಿನ ಚಿಕ್ಕಗಡಿಯಾರ ಬಳಿ ಇಂದು ಪ್ರತಿಭಟನಾ ರ್ಯಾಲಿ ನಡೆಯಲಿದೆ. ಮಧ್ಯಾಹ್ನದವರೆಗೆ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದು ರ್ಯಾಲಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಆಹ್ವಾನ ನೀಡಲಾಗಿದೆ.
ದೇವರಾಜ ಮಾರುಕಟ್ಟೆ ಶಿಥಿಲಗೊಂಡಿರುವ ಹಿನ್ನೆಲೆ ಅದನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಲು ಪಾಲಿಕೆ ಮುಂದಾಗಿದೆ. ಆದ್ರೆ 100 ವರ್ಷದ ಇತಿಹಾಸ ಹೊಂದಿರುವ ದೇವರಾಜ ಮಾರ್ಕೆಟ್ ಹೊಸದಾಗಿ ಕಟ್ಟುವ ಮೈಸೂರು ಪಾಲಿಕೆ ನಿರ್ಧಾರಕ್ಕೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪಾರಂಪರಿಕ ಕಟ್ಟಡವನ್ನ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಟ್ಟಡವನ್ನು ನವೀಕರಣ ಮಾಡಿ ಹೊಸದಾಗಿ ಕಟ್ಟ ಬೇಡಿ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಪ್ರತಿಭಟನಾ ಮೆರವಣಿಗೆಗೆ ರಾಜವಂಶಸ್ಥ ಯದುವೀರ್ ಚಾಲನೆ
ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಪಾರಂಪರಿಕ ಸಮಿತಿ ಅಸ್ತು ಹಿನ್ನೆಲೆ ಮೈಸೂರಿನ ದೇವರಾಜ ಮಾರುಕಟ್ಟೆ ಸಮಿತಿಯಿಂದ ಹೋರಾಟ ನಡೆಯುತ್ತಿದೆ. ಪ್ರತಿಭಟನಾ ಮೆರವಣಿಗೆಗೆ ರಾಜವಂಶಸ್ಥ ಯದುವೀರ್ ಚಾಲನೆ ನೀಡಿದ್ದಾರೆ. ಈವರೆಗೆ ಮಾರುಕಟ್ಟೆಯ ಯಾವುದೇ ಅಂಗಡಿ ವರ್ತಕರು ತೆರೆದಿಲ್ಲ. ದೇವರಾಜ ಮಾರುಕಟ್ಟೆಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ಶುರುವಾಗಿದ್ದು ದೇವರಾಜ ಮಾರ್ಕೆಟ್, ಲ್ಯಾನ್ಸ್​ಸ್ಟೋನ್ ಬಿಲ್ಡಿಂಗ್ ಉಳಿಸಲು ಒತ್ತಾಯಿಸಲಾಗಿದೆ.
ಇನ್ನು ದೇವರಾಜ ಮಾರುಕಟ್ಟೆಗೆ 100 ವರ್ಷ ಆಗಿದೆ ಅದನ್ನು ಕೆಡವಬೇಕು ಅನ್ನೋ ವಿಚಾರಕ್ಕೆ ಸಂಬಂಧಿಸಿ ಮೈಸೂರು ಅರಮನೆಯನ್ನು ಕಟ್ಟಿ 100 ವರ್ಷದ ಮೇಲಾಗಿದೆ. ಈಗ ಅರಮನೆ ಕೆಡವಿ ಬೇರೆ ಕಟ್ಟಲು ಆಗುತ್ತಾ? ಎಂದು ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ್ ಪ್ರಶ್ನಿಸಿದ್ದಾರೆ. ಮೈಸೂರಿನ ಸಂಸ್ಕೃತಿ ಪಾರಂಪರಿಕ ಕಟ್ಟಡಗಳ ಜೊತೆ ಬೆರೆತಿದೆ. ನೂರು ವರ್ಷ ಆಗಿದೆ ಎಂದು ಕಟ್ಟಡಗಳನ್ನು ಒಡೆಯುತ್ತಾ ಹೋದರೆ ಪಾರಂಪರಿಕತೆ ಉಳಿಯುತ್ತಾ? ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ಕಟ್ಟಿದರೂ ಕೂಡಾ ಆ ಕಟ್ಟಡಕ್ಕೆ ಹಳೇ ಇತಿಹಾಸ ಬರುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪಾರಂಪರಿಕ ಕಟ್ಟಡ ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು. ಜನರ ಅಭಿಪ್ರಾಯಗಳಿಗೆ, ಭಾವನಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ನಮ್ಮ ವಂಶದ ಖಾಸಗಿ ಆಸ್ತಿಗಳ ನವೀಕರಣ ಅದು ಬೇರೆ ವಿಚಾರ. ಆದರೆ ಸಾರ್ವಜನಿಕರ ಸ್ವತ್ತಿನ ಕಟ್ಟಡಗಳದ್ದು ಬೇರೆಯ ವಿಚಾರ. ಅರಮನೆಯ ಆಸ್ತಿಯ ವಿಚಾರಕ್ಕೂ ಸಾರ್ವಜನಿಕರ ಸ್ವತ್ತಿನ ಪಾರಂಪರಿಕ ಕಟ್ಟಡಗಳಿಗೂ ಸಂಬಂಧ ಕಲ್ಪಿಸಬೇಡಿ ಎಂದರು.