ಮನೆ ರಾಜಕೀಯ ದೇಗುಲಗಳಲ್ಲಿ ಪುರುಷರು ಮೇಲಂಗಿ ಕಳಚುವ ಪದ್ಧತಿ ಕೈಬಿಡಲು ದೇವಸ್ವಂ ಮಂಡಳಿ ಚಿಂತನೆ: ಪಿಣರಾಯಿ ವಿಜಯನ್

ದೇಗುಲಗಳಲ್ಲಿ ಪುರುಷರು ಮೇಲಂಗಿ ಕಳಚುವ ಪದ್ಧತಿ ಕೈಬಿಡಲು ದೇವಸ್ವಂ ಮಂಡಳಿ ಚಿಂತನೆ: ಪಿಣರಾಯಿ ವಿಜಯನ್

0

ತಿರುವನಂತಪುರಂ(ಕೇರಳ): ದೇಗುಲಗಳಲ್ಲಿ ಗರ್ಭಗುಡಿ ಪ್ರವೇಶಿಸುವ ಸಂದರ್ಭದಲ್ಲಿ ಪುರುಷರು ಮೇಲಂಗಿ (ಶರ್ಟ್​-ಬನಿಯನ್​) ಕಳಚುವ ದೀರ್ಘಕಾಲದ ಪದ್ಧತಿಗೆ ಕೇರಳದ ದೇವಸ್ವಂ ಮಂಡಳಿಗಳು​ ಇತಿಶ್ರೀ ಹಾಡಲು ಚಿಂತಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್​ ಹೇಳಿದರು.

Join Our Whatsapp Group

ಮೇಲಂಗಿ ತೆಗೆಯುವ ಸಂಪ್ರದಾಯ ಸಾಮಾಜಿಕ ಅನಿಷ್ಟವಾಗಿದ್ದು, ಇದನ್ನು ಕಿತ್ತು ಹಾಕಬೇಕು ಎಂದು ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಸ್ಥಾಪಿತ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ಸಿಎಂ ಈ ಬಗ್ಗೆ ಮಾತನಾಡಿರುವುದು ಗಮನಾರ್ಹ.

ಮಂಗಳವಾರ ಶಿವಗಿರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಎಂ ವಿಜಯನ್​, ಶ್ರೀಗಳ ಕರೆಗೆ ಸಹಮತ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಬುಧವಾರ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಇಂದು ದೇವಸ್ವಂ ಮಂಡಳಿ ಸದಸ್ಯರು ನನ್ನನ್ನು ಭೇಟಿಯಾಗಿದ್ದು, ಮೇಲಂಗಿ ತೆಗೆಯುವ ಆಚರಣೆಯ ಕುರಿತು ನಿರ್ಧರಿಸುವುದಾಗಿ ತಿಳಿಸಿದರು. ಇದು ಉತ್ತಮವಾದ ವಿಚಾರವೆಂದು ತಿಳಿಸಿದ್ದೇನೆ. ಆದಾಗ್ಯೂ, ಯಾವ ದೇವಸ್ವಂ ಮಂಡಳಿ ಈ ನಿರ್ಧಾರ ಜಾರಿ ಮಾಡುತ್ತದೆ ಎಂಬ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ” ಎಂದರು.

ಕೇರಳದಲ್ಲಿ ಗುರುವಾಯೂರು, ತಿರುವಾಂಕೂರ್​, ಮಲಬಾರ್​, ಕೊಚ್ಚಿನ್​ ಮತ್ತು ಕೂಡಲ್​ಮನಿಕ್ಯಂ ಎಂಬ ಐದು ದೇವಸ್ವಂ ಮಂಡಳಿಗಳಿದ್ದು, ಇವರು ಒಟ್ಟಾಗಿ 3,000 ದೇಗುಲಗಳನ್ನು ನಿರ್ವಹಣೆ ಮಾಡುತ್ತಾರೆ.

“ಸಚ್ಚಿದಾನಂದ ಸ್ವಾಮಿಗಳು ಮೇಲಂಗಿ ಪದ್ಧತಿಯನ್ನು ತೆಗದುಹಾಕಲು ಕರೆ ನೀಡಿದ್ದು, ಅವರ ಮಾತನ್ನು ನಾನು ಅನುಮೋದಿಸಿದ್ದೇನೆ. ಈ ಕುರಿತು ಅಂತಿಮ ನಿರ್ಧಾರವನ್ನು ದೇವಸ್ವಂ ಮಂಡಳಿಗಳು ಕೈಗೊಳ್ಳಬೇಕಿದ್ದು, ಸರ್ಕಾರದ ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ” ಎಂದು ಸಿಎಂ ಪಿಣರಾಯಿ ಹೇಳಿದ್ದಾರೆ.