ಬೆಳಗಾವಿ(Belagavi): ಸವದತ್ತಿ ಜಾತ್ರೆಗೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ ಹೊಡೆದು ಆರು ಜನ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ ಬಳಿ ಗುರುವಾರ ನಸುಕಿನ ಜಾವ ನಡೆದಿದೆ.
ಮೃತಪಟ್ಟವರೆಲ್ಲರೂ ರಾಮದುರ್ಗ ತಾಲ್ಲೂಕಿನ ಹುಲಕುಂದ ಗ್ರಾಮದವರಾಗಿದ್ದಾರೆ.
ಹಣಮವ್ವ ಮೇಗಾಡಿ (25), ಮಾರುತಿ (42), ಇಂದ್ರವ್ವ (24), ದೀಪಾ (31), ಸವಿತಾ (17), ಸುಪ್ರಿತಾ (11) ಮೃತಪಟ್ಟವರು. ಗಾಯಾಳುಗಳನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ನಸುಕಿನ ಜಾವ ಎಲ್ಲರೂ ಗೂಡ್ಸ್ ವಾಹನ ಬಾಡಿಗೆ ಮಾಡಿಕೊಂಡು ಯಲ್ಲಮ್ಮನ ಗುಡ್ಡಕ್ಕೆ ರೇಣುಕಾದೇವಿ ಜಾತ್ರೆಗೆ ತೆರಳುತ್ತಿದ್ದರು. ಗ್ರಾಮದಿಂದ ಹೊರಟ ವಾಹನವು ರಾಮದುರ್ಗ ಮಾರ್ಗವಾಗಿ, ಚುಂಚನೂರು ಗ್ರಾಮದ ಸರಹದ್ದಿಗೆ ಬಂದಿತ್ತು. ವೇಗವಾಗಿ ಚಲಿಸುತ್ತಿದ್ದ ವಾಹನ ಚುಂಚನೂರು ವಿಠಲಪ್ಪನ ದೇವಸ್ಥಾನದ ಮುದಿನ ಬೃಹತ್ ಆಲದ ಮರಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿತು.
ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಐವರು ಸ್ಥಳದಲ್ಲೇ ಮೃತಪಟ್ಟರು. ಒಬ್ಬ ಗೋಕಾಕ ತಾಲ್ಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಮಾರ್ಗದಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಇತರ ವಾಹನಗಳ ಸವಾರರು, ಗ್ರಾಮಸ್ಥರು ಸಹಾಯಕ್ಕೆ ಧಾವಿಸಿದರು. ಸ್ಥಳಕ್ಕೆ ಬಂದ ಕಟಕೋಳ ಪೊಲೀಸರೂ ಆಂಬುಲೆನ್ಸ್‌ಗಳನ್ನು ಕರೆಯಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು.
ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗುವಾಗ ವಾಹನ ಅಪಘಾತದಿಂದ 6 ಮಂದಿ ಮೃತಪಟ್ಟಿದ್ದು, 16 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನ ಘೋಷಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಚನೆ ನೀಡಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಾಹನ ಅಪಘಾತದಲ್ಲಿ 16 ಕ್ಕೂ ಹೆಚ್ಚು ಗಾಯಗೊಂದಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾನೆ ಎಂದರು.
ಮೃತರ ಕುಟುಂಬಕ್ಕೆ ಆಗಿರು ದುಃಖ ಹಾಗೂ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಭಗವಂತ ಶಾಂತಿಯನ್ನ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.














