ತಿರುವನಂತಪುರಂ : ಮಕರ ಸಂಕ್ರಾಂತಿ ಬಂದರೆ, ಸಾಕು ದೇಶದೆಲ್ಲೆಡೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಘೋಷಣೆಗಳು ಕೇಳಿ ಬರುತ್ತವೆ. ಅಯ್ಯಪ್ಪನ ಭಕ್ತರು ಮಾಲಾಧಾರಿಗಳಾಗಿ ಇಡುಮುರಿ ಕಟ್ಟಿಕೊಂಡು ಮಣಿಕಂಠನ ದರ್ಶನಕ್ಕೆ ಹೊಗುವುದನ್ನ ನೋಡುವುದೇ ಒಂದು ಹಬ್ಬ. ಇಂದು ಮಕರ ಸಂಕ್ರಾಂತಿ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಮಕರ ಜ್ಯೋತಿ ನೋಡಲು ಕೋಟ್ಯಂತರ ಭಕ್ತರು ಕಾಯುತ್ತಿದ್ದಾರೆ.
ತತ್ವಮಸಿ ಅಯ್ಯಪ್ಪ, ವೇದದ ಮಹಾವಾಕ್ಯವಾದ ನೀನೇ ಆ ದೇವರು ಅನ್ನೋ ವೇದದ ವಾಕ್ಯವನ್ನ ಅಯ್ಯಪ್ಪನ ಭಕ್ತಿ ಹಾಗೂ ತತ್ವದ ಮೂಲಕ ಅರಿಯುವುದು. ಇದು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಒಂದು ಸರಳ ಹಾದಿ. ಮಕರ ಸಂಕ್ರಾಂತಿ ಸನಿಹದಲ್ಲಿ ಈ ಹಾದಿಯಲ್ಲಿ ನಡೆಯಲು ಲಕ್ಷಾಂತರ ಜನರು ಅಯ್ಯಪ್ಪನ ಮಾಲೆ ಹಾಕಿಕೊಂಡು, ತತ್ವಮಸಿ ತತ್ವವನ್ನು ತಮ್ಮದಾಗಿಸಿಕೊಂಡು ಆ ಹಾದಿಯಲ್ಲಿ ನಡೆಯಲು ಶುರು ಮಾಡುತ್ತಾರೆ.
ಕಠಿಣ ವೃತಗಳನ್ನು ಮುಗಿಸಿ, ಶಬರಿಮಲೆಗೆ ತೆರಳಿ ಅಲ್ಲಿ ಮಕರ ಜ್ಯೋತಿ ದರ್ಶನ ಮಾಡಿಕೊಂಡು, ಪುನೀತರಾಗಿ ಬರುತ್ತಾರೆ. ಈ ಬಾರಿಯೂ ಕೂಡ ಆ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಮಕರ ಜ್ಯೋತಿ ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸಾಗರೋಪಾದಿಯಲ್ಲಿ ಇನ್ನೂ ಆಗಮಿಸುತ್ತಲೇ ಇದ್ದಾರೆ. ಮಕರ ಸಂಕ್ರಾಂತಿ ಸಮಯ ಅಂದ್ರೆ ಅದು ಶಬರಿಮಲೆ ಅಯ್ಯಪ್ಪನ ಭಕ್ತರ ದಿನ. ದೇಶದ ಮೂಲೆ ಮೂಲೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಮಕರ ಸಂಕ್ರಾಂತಿಯಂದು ಇಲ್ಲಿಗೆ ಬಂದು ನೆರೆಯುತ್ತಾರೆ. ಜ್ಯೋತಿ ರೂಪದಲ್ಲಿ ಬಂದು ದರ್ಶನ ನೀಡುವ ಅಯ್ಯಪ್ಪನನ್ನ ಕಂಡು ಪುನೀತರಾಗುವುದರೊಂದಿಗೆ ಪುಳಕಿತರು ಆಗುತ್ತಾರೆ.

ಶಬರಿಮಲೆಯತ್ತ ಭಕ್ತಕೋಟಿ ಆಗಮಿಸುತ್ತಿರುವ ಹಿನ್ನೆಲೆ ವಿಶೇಷ ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಭಕ್ತರಿಗಾಗಿ ವಿಶೇಷವಾಗಿ 1,000 ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹೆಚ್ಚಿಸಲಾಗಿದ್ದು, ಅಯ್ಯಪ್ಪನ ಭಕ್ತರ ಉಪವಾಸವು ಈ ಮಕರ ಸಂಕ್ರಾಂತಿಯಂದು ಅಂತ್ಯಗೊಳ್ಳುತ್ತದೆ. ಅಯ್ಯಪ್ಪ ಸ್ವತಃ ಆಗಸದಲ್ಲಿ ಸಂಜೆ ನಂತರ ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ, ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಭಕ್ತ ಕೋಟಿ ಶಬರಿಮಲೆಯಲ್ಲಿ ಸೇರಿರುತ್ತಾರೆ.
ಈ ಎಲ್ಲಾ ಸಂಭ್ರಮಗಳ ನಡುವೆಯೂ ಕೇರಳದಲ್ಲಿ ಕಿರಿಕ್ ಒಂದು ಆಗಿದೆ. ರಾಜ್ಯದ ಅಯ್ಯಪ್ಪ ಮಾಲಾಧಾರಿಗಳಿಗೆ, ಕೇರಳ ಪೊಲೀಸರು ಕಿರಿಕ್ ಕೊಡುವ ಮೂಲಕ, ಅವರ ಭಕ್ತಿ ಮತ್ತು ಶ್ರದ್ಧೆಗೆ ಅವಮಾನ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಎರೆಮಲೆಯಲ್ಲಿ ಭಕ್ತರ ವಾಹನ ನಿಲ್ಲಿಸಿ ಕೇರಳ ಬಸ್ ಮೂಲಕ ಶಬರಿಮಲೆಗೆ ಹೋಗುವಂತೆ ಪೊಲೀಸರು ಹೇಳುತ್ತಿದ್ದಾರೆ. ಈಗಾಗಲೇ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ. ಮತ್ತೆ ಕೇರಳ ಬಸ್ಗಳಿಗೆ ಹಣ ಕೊಟ್ಟು ಹೋಗಬೇಕು. ಇದು ಕೇರಳ ಸರ್ಕಾರದಿಂದ ನಮ್ಮ ಮೇಲೆ ಆಗುತ್ತಿರುವ ಅನ್ಯಾಯ ಎಂದು ರಾಜ್ಯದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.















