ಮನೆ ದೇವರ ನಾಮ ಬಾರಯ್ಯ ರಂಗ ಬಾರಯ್ಯ ಕೃಷ್ಣ

ಬಾರಯ್ಯ ರಂಗ ಬಾರಯ್ಯ ಕೃಷ್ಣ

0

ಬಾರಯ್ಯ ರಂಗ ಬಾರಯ್ಯ ಕೃಷ್ಣ

ಬಾರಯ್ಯ ಸ್ವಾಮಿ ಬಾರಯ್ಯ ||ಪ||

ವಾರಣಭಯವ ನಿವಾರಣ ಮಾಡಿದ

ಕಾರುಣ್ಯನಿಧಿಯೆನ್ನ ಹೃದಯ ಮಂದಿರಕೆ ||ಅ||

ಮೊದಲಿಂದ ಬರಬಾರದೆ ನಾನು ಬಂದೆ

ತುದಿ ಮೊದಲಿಲ್ಲದ್ಹೊಂದಿದೆ ಅಪನಿಂದೆ

ಇದು ಗೆದ್ದು ಕಳೆದುಪೋಪುದು ಹೇಗೆ ಮುಂದೆ

ಪದುಮನಾಭ ತಪ್ಪು ಕ್ಷಮಿಸಯ್ಯ ತಂದೆ ||

ಹೆಣ್ಣು ಹೊನ್ನು ಮಣ್ಣಿನಾಸೆಯೊಳಿದ್ದು

ಪುಣ್ಯ ಪಾಪಂಗಳ ನಾನರಿತಿದ್ದು

ಅನ್ಯಾಯವಾಯಿತು ಇದಕೇನು ಮದ್ದು

ನಿನ್ನ ಧ್ಯಾನವ ಕೊಡು ಹೃದಯದೊಳಿದ್ದು ||

ಇಂದೆನ್ನ ಪೂರ್ವ ಪಾಪಂಗಳ ಕಳೆದು

ಮುಂದೆನ್ನ ಜನ್ಮ ಸಫಲವನ್ನುಗೈದು

ತಂದೆ ಪುರಂದರವಿಠಲ ನೀನೊಲಿದು

ಎಂದೆಂದಿಗಾನಂದ ಸುಖವನ್ನು ಸುರಿದು |