ಶ್ರೀ ಮಹಾಲಕುಮಿ ದೇವಿಯೆ ಕೋಮಲಾಂಗಿಯೆ ಸಾಮಗಾಯನ ಪ್ರಿಯಳೇ
ಹೇಮಗರ್ಭ ಕಾಮಾರಿ ಶಕ್ರಸುರ ಸ್ತೋಮ ವಂದಿತೆ ಸೋಮಸೋದರಿಯೇ ||
ಸಕಲ ಶುಭಗುಣ ಭರಿತಳೆ ಏಕ ದೇವಿಯೆ ವಾಕು ಲಾಲಿಸಿ ನೀ ಕೇಳೆ
ಲೋಕನಾಥನ ಗುಣ ಲೀಲೇ ಕೊಂಡಾಡುವಂಥ ಏಕಮನವ ಕೊಡು ಶುಭಶೀಲೆ
ಬೇಕುಬೇಕು ನಿನ್ನ ಪತಿಪಾದಾಬ್ಜವ ಏಕಾಂತದಲಿ ಭಜಿಪರ ಸಂಗವ ಕೊಡು
ಲೋಕದ ಜನರಿಗೆ ನಾ ಕರವೊಡ್ಡದಂತೆ ತಾಯೆ ಕರುಣಿಸು ರಾಕೆಂದುವದನೆ || ೧ ||
ಬಟ್ಟಕುಂಕುಮ ನೊಸಲೊಳೆ ಮುತ್ತಿನ ಹೊಸ ಕಠ್ಠಾಣಿ ತ್ರಿವಳಿ ಕೊರಳೊಳು
ಇಟ್ಟ ಪೊನ್ನೋಲೆ ಕಿವಿಯೊಳೆ ಪವಳದ ಕಯ್ಯ ಕಟ್ಟು ಕಂಕಣ ಕೈ ಬಳೆ
ತೊಟ್ಟ ಕುಬುಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದುಗೆ ರುಳಿಗೆಜ್ಜೆ
ಬೆಟ್ಟಿಲಿ ಪೊಳೆವುದು ಮೇಂಟಕೆ ಕುರುಪಿಲ್ಲಿ ಇಟ್ಟು ಶೋಭಿಸುವ ಅಷ್ಟ ಸಂಪನ್ನೆ || ೨ ||
ಮಂದರಧರನರಸಿಯೆ ಇಂದಿರೆ ಎನ್ನ ಕುಂದುದೋಷಗಳನೀ ತರಿಯೆ
ಅಂದುಳ್ಳ ಸೌಭಾಗ್ಯದಸಿರಿಯೇ ನಿನ್ನ ಕಂದನೆಂದು ಮುಂದಕ್ಕೆ ಕರೆಯೇ
ಸಿಂಧುಸುತಳೇ ನಿತ್ಯಸಿಂಧೂರ ಗಮನೇ ಸಿಂಧುಶಯನ
ಸಿರಿ ವಿಜಯವಿಠಲನ ಎಂದೆಂದಿಗು ಮನದಿಂದ ಅಗಲದಂತೆ || ೩ ||