ಹೋಮವನು ತಾ ಮಾಡಬೇಕಣ್ಣ ತಮವ ಬಿಟ್ಟು ಹೋಮವನು ತಾ
ಮಾಡಬೇಕಣ್ಣಾ ಹೋಮವನ್ನು ತಾ ಮಾಡಬೇಕು
ಕಾಮ್ಯ ಬಿಟ್ಟು ನೇಮದಿಂದ ಸ್ವಾಮಿ ದಹನನ ಸ್ವಾಮಿ ಚರಣಕೆ
ಅರ್ಪಿಸುತ ದಿನ ಜನ್ಮ ಲಾಭದ ||ಹೋಮವನು||
ಆರು ಮೂರೆರಡು ಇಟ್ಟಿಗೆಯಣ್ಣ ಪರಿಪರಿಯ ವಿಧದಲಿ
ಹುಡುಕುವೆ ನೀ ಏಕೆ ಕಾಣಣ್ಣಾ ||ಆರು||
ಸಾರಿರುವ ಪುರಾಣ ತತಿಗಳ ಸಾರವನ್ನು ತಂದು ಇಟ್ಟಿಗೆ ಇರಿಸಿ
ಭವವನು ಬಿಟ್ಟು ಪೋಗುವ ಪರಿಯ ಯಾಚಿಸಿ ತ್ವರಿತದಿಂದಲಿ ||ಹೋಮವನು||
ನಿಗಮವೆಂಬೊ ಕಟ್ಟಿಗೆಯಣ್ಣಾ ಧಗಿಸುವಂತ
ಜ್ಞಾನವನು ನೀ ಬೆಳಗ ಬೇಕಣ್ಣಾ |||ನಿಗಮ||
ಸುಖದ ಭಂಜನ ಆರು ಗುಣಗಳ ನೂರು ಪರಿಯಲಿ ಹೋಮಿಸುತ ದಿನ
ಸುಖವ ಪ್ರೇರಿಪ ನುಡಿಯ ಪಾಡುತ ತಡವ ಮಾಡದೆ ಭಕುತಿಯಿಂದಲಿ ||ಹೋಮವನು||
ಆರು ಎರಡು ವಿಷಯದಾಶ್ರಯಿತ ಎಂದು ತಿಳಿದು
ಪೂರ್ಣನಿಗೆ ತಾ ಪೂರ್ಣ ಫಲವಿತ್ತೂ ||ಆರು||
ಪೂರ್ಣಪ್ರಜ್ಞರ ಪೂರ್ಣ ಮತವನು ಪೂರ್ಣದಿಂದಲಿ ನೆನೆಸಿ ಮನದಲಿ
ಪೂರ್ಣಗುರು ಆನಂದವಿಠ್ಠಲನ ಕರುಣದಿಂದ ಕರವ ಮುಗಿಯುತ ||ಹೋಮವನು ||