ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ನಿನಗಿಂತ ಕುಂದೇನೊ || ಪ ||
ಮತ್ಸ್ಯಾವತಾರ ನೀನಾದರೆ ಆಕೆ ಮತ್ಸ್ಯಗಂಗಳೆ ತಾನಾದಳೊ |
ಹೆಚ್ಚಿನ ಶಂಖವ ಹಿಡಿದರೆ ಆಕೆ ನಿಚ್ಚ ಶಂಖದ ಕಂಠಳಾದಳಯ್ಯ ||
ನೀಲವರ್ಣ ನೀನಾದರೆ ಆಕೆ ನೀಲಕುಂತಳೆ ತಾನಾದಳೊ |
ಲೋಲ ಕಮಲನಾಭನಾದರೆ ಆಕೆ ಬಾಲ ಕಮಲಮುಖಿಯಾದಳಯ್ಯ ||
ಬೆಟ್ಟವ ನೀನೊಂದು ಪೊತ್ತರೆ ಕುಚದ ಬೆಟ್ಟಗಳೆರಡುನು ತಾ ಪೊತ್ತಳೊ |
ದಿಟ್ಟ ಶೇಷನ ನೀ ತುಳಿದರೆ ಆಕಿ ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ ||
ಗಜರಾಜ ವರದ ನೀನಾದರೆ ಆಕೆ ಗಜಗಮನೆಯು ತಾನಾದಳಯ್ಯ |
ನಿಜವಾದ ಸಿಂಹ ನೀನಾದರೆ ಆಕೆ ಭಜಿಸಿ ಸಿಂಹ ಮಧ್ಯೆಯಾಗಿಪ್ಪಳಯ್ಯ ||
ಈ ಪರಿಯಲಿ ಬಹು ಜನಿಸಿದೆ ಭಲೆ ಭಾಪುರೆ ಬಾಡದೊಳ್ |
ನೆಲೆಸಿದೆ ಗೋಪಿಯರ ಮೋಹ ಸಲಿಸಿದೆ ಚೆಲುವ ಶ್ರೀಪತಿ ಆದಿಕೇಶವರಾಯ ಮೆರೆದೆ ||