ಮನೆ ದೇವರನಾಮ ದೇವಿ ಅಂಬುಜವಲ್ಲಿ ರಮಣನೆ

ದೇವಿ ಅಂಬುಜವಲ್ಲಿ ರಮಣನೆ

0

ದೇವಿ ಅಂಬುಜವಲ್ಲಿ ರಮಣನೆ ।

ಭೂವರಾಹ ದಯಾನಿಧೇ ॥

ಪವಮಾನನ ದಿವ್ಯ ಕರದಲಿ ।

ಸೇವೆ ಸಂತತ ಕೊಳ್ಳುವೆ ॥೧॥

ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ ।

ನೀ ವಿಹಾರವ ಮಾಡುವೆ ॥

ಭವವಿಮೋಚನ ಭಕ್ತವತ್ಸಲ ।

ಕವಿಗಳಿಗೆ ಕರುಣಾಕರ ॥೨॥

ಅತ್ಯಗಾಧ ಸುಶೀಲ ಜಾಹ್ನವಿ ।

ಸುತ್ತು ಷೋಡಶ ತೀರ್ಥದಿ ॥

ನಿತ್ಯ ಪುಷ್ಕರಿಣಿಯ ಗರ್ಭದಿ ।

ನಿತ್ಯ ಇರುವುದು ಕಂಡೆ ನಾ ॥೩॥

ಮತ್ತು ವರ್ಣಿಪೆ ತೀರ್ಥ ತಟದಲಿ ।

ಉತ್ತಮಾಗ್ನೇಯ ಭಾಗದಿ ॥

ಚಿತ್ತವೇದ್ಯದಿ ಕಲ್ಪತರು ಅ ।

ಶ್ವತ್ಥ ರೂಪದಿ ಇರುವನ ॥೪॥

ಕರಗಳೆರಡನು ಕಟಿಯಲಿಟ್ಟು ।

ಕೋರೆಹಲ್ಲನೆ ತೋರುತ ॥

ಧರಿಸಿ ಚಿನ್ಮಯ ಸಾಲಿಗ್ರಾಮದ ।

ಸರವು ಈ ಪರಿ ಬೆಳಗುತ ॥೫॥

ಘನ್ನ ಶ್ವೇತವರಾಹ ಮೂರುತಿ ।

ಎನ್ನ ಪೂರ್ವದ ಪುಣ್ಯದಿ ॥

ನಿನ್ನ ಶುಭಕರ ಪಾದ ಪಂಕಜ ।

ವನ್ನು ಕಂಡೆನು ಇಂದು ನಾ ॥೬॥

ಸುಂದರಾನನ ಕಂಜ ಮಧುಪನ ।

ಇಂದು ನೋಡಿದ ಕಾರಣ ॥

ಬಂದ ದುರಿತಗಳೆಲ್ಲ ಪೋದವು ।

ಚಂದ ಶುಭಕರವಾದವು ॥೭॥

ಮಲ್ಲಮರ್ದನ ವೈಕುಂಠದಿಂದ ।

ಮೆಲ್ಲಮೆಲ್ಲನೆ ಬಂದೆಯಾ ॥

ಝಲ್ಲಿ ಕಾವಣದಲ್ಲಿ ಕುಳಿತು ।

ಎಲ್ಲ ಭಕ್ತರ ಸಲಹುವೆ ॥೮॥

ಸೂಕರಾಸ್ಯನೆ ನಿನ್ನ ಪಾದಕ ।

ನೇಕ ವಂದನೆ ಮಾಡುವೆ ॥

ಶೋಕಹರ ಗೋಪಾಲವಿಠಲ ।

ನೀ ಕರುಣಿಸಿ ರಕ್ಷಿಸೋ ॥೯॥

ಹಿಂದಿನ ಲೇಖನಕೆ ಆರ್ ಎಸ್  ಅಣೆಕಟ್ಟೆಯಿಂದ ನದಿ-ನಾಲೆಗಳಿಗೆ  ನೀರು ಬಿಡುಗಡೆ
ಮುಂದಿನ ಲೇಖನಮೆಕ್ಕೆಜೋಳ ಸೇವಿಸುವುದರಿಂದ ಆರೋಗ್ಯಕ್ಕಿದೆ ಭರಪೂರ ಲಾಭ