ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ
ನಿಗಮಗೋಚರ ಮುಕುಂದ ।।
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾವ ಧೊರೆಗಳ ನಾ ಕಾಣೆ ।।
ದಾನವಾಂತಕ ದೀನಜನಮಂದಾರನೆ
ಧ್ಯಾನಿಪರ ಮನಸಂಚಾರನೆ ।
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೊ ಸನಕಾದಿವಂದ್ಯನೆ ।।
ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ
ಖಗಪತಿವಾಹನನೆ ।
ಮಗುವಿನ ಮಾತೆಂದು ನಗುತ ಕೇಳುತ ಬಂದೆ
ಬೇಗದಿಂದಲಿ ಕಾಯೊ ಸಾಗರಶಯನನೆ ।।
ಮಂದರಧರ ಅರವಿಂದಲೋಚನ ನಿನ್ನ
ಕಂದನೆಂದೆಣಿಸೊ ಎನ್ನ ।
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ
ಬಂದೆನ್ನ ಕಾಯೊ ಶ್ರೀಪುರಂದರವಿಠಲ ।।
ರಚನೆ : ಶ್ರೀ ಪುರಂದರ ದಾಸರು