ರಚನೆ : ಶ್ರೀ ಗೋಪಾಲಕೃಷ್ಣ ವಿಠ್ಠಲದಾಸರು
ಮುದ್ದು ಮುಖದ ಲಕುಮಿ ಎನಗೆ
ಶುದ್ಧ ಜ್ಞಾನವ ನೀಡೆ ||ಪ||
ಬಿದ್ದಿಹೆ ನಿನ್ನ ಪದದಲಿ ನಿರುತ
ಮದ್ಬಿಂಬನ ತೋರೆ ||ಅ.ಪ.||
ಹರಿಸರ್ವೋತ್ತಮ ಸುರರಕ್ಷಕನೆಂಬ
ಖರೆಯ ಜ್ಞಾನವ ನೀಡೆ
ಕರಕರೆಗೊಳಿಸದೆ ದುರ್ವಿಷಯದಲೆನ್ನ
ಹರಿಯ ಧ್ಯಾನವನೀಡೆ ||1||
ನಗೆಮೊಗ ಚಲುವೆ ಖಗವಾಹನ ಪ್ರಿಯೆ
ಜಗದೊಡೆಯನ ತೋರೆ
ನಗಧರನ ನಿತ್ಯ ಬಗೆ ಬಗೆ ಲೀಲೆಯ
ಸುಗುಣವಂತೆ ತಿಳಿಸೆ ||2||
ಸೃಷ್ಟಿಕರ್ತಗೆ ಪಟ್ಟದ ನಾರಿಯೆ
ದೃಷ್ಟ ಇಂದ್ರಿಯವಳಿಯೆ
ಮುಟ್ಟಿ ಭಜಿಪೆ ನಿನ್ನ
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲ ಸತಿಯೆ ||3||