ಮಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬುರುಡೆ ಗ್ಯಾಂಗ್ ವಿರುದ್ಧ ಕಾನೂನು ಹೋರಾಟಕ್ಕೆ ಇದೀಗ ಶ್ರೀ ಕ್ಷೇತ್ರವೇ ಅಧಿಕೃತವಾಗಿ ಎಂಟ್ರಿಯಾಗಿದೆ. ಈ ಮೂಲಕ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ತಕ್ಕಪಾಠ ಕಲಿಸಲು ಮುಂದಾಗಿದ್ದು, ಶನಿವಾರ (ಜ.3) ಕೋರ್ಟ್ನಲ್ಲಿ ನಿರ್ಧಾರವಾಗಲಿದೆ.
ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೆ ಹೊಸ ಚರ್ಚೆಗೆ ಕಾರಣವಾಗಿದೆ. ಇದುವರೆಗೂ ಪ್ರಕರಣ ಸಂಬಂಧ ಸುಮ್ಮನಿದ್ದ ಶ್ರೀಕ್ಷೇತ್ರ ಧರ್ಮಸ್ಥಳ, ಇದೀಗ ಕಾನೂನಾತ್ಮಕ ಹೋರಾಟಕ್ಕೆ ಇಳಿದಿದೆ. ಎಸ್ಐಟಿ ವರದಿಯ ವಿಚಾರಣೆಯಲ್ಲಿ ತನ್ನನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿ ಸಲ್ಲಿಸಿದೆ.
ಎಸ್ಐಟಿ ಸಲ್ಲಿಸಿದ ವರದಿಯನ್ವಯ ನಾಳೆ ನ್ಯಾಯಾಲಯ ಆದೇಶ ನೀಡುವ ಸಾಧ್ಯತೆ ಇತ್ತು. ಆದರೆ, ಇದೀಗ ಕ್ಷೇತ್ರದ ಪರವಾಗಿ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದರಿಂದ ಮಹತ್ವದ ತಿರುವು ಪಡೆದಿದೆ. ಒಂದು ವೇಳೆ ನ್ಯಾಯಾಲಯ ಅರ್ಜಿಯನ್ನು ಸ್ವೀಕರಿಸಿದರೆ, ಶನಿವಾರ (ಜ.3) ನೀಡಲಿರುವ ಆದೇಶ ಮತ್ತೆ ಮುಂದೂಡಿಕೆ ಆಗುವ ಸಾಧ್ಯತೆಯೂ ಇದೆ.
ಬುರುಡೆ ಪ್ರಕರಣ ಸಂಬಂಧ ಎಸ್ಐಟಿ ಈಗಾಗಲೇ ಸುದೀರ್ಘ 4 ಸಾವಿರ ಪುಟಗಳ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಲ್ಲಿ ಮಾಸ್ಕ್ಮ್ಯಾನ್ ಚಿನ್ನಯ್ಯ ಸೇರಿದಂತೆ 6 ಮಂದಿ ಸೇರಿ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಿರುವುದನ್ನು ಉಲ್ಲೇಖಿಸಲಾಗಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ಅದೇ ನ್ಯಾಯಾಲಯದಲ್ಲಿ ಧರ್ಮಸ್ಥಳ ಪರ ವಕಾಲತ್ತು ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಎಸ್ಐಟಿ ಸಲ್ಲಿಸಿದ ವರದಿ ಮೇಲಿನ ಆದೇಶ ಏನಾಗಬಹುದು ಅನ್ನೋ ಕುತೂಹಲವೂ ಹೆಚ್ಚಾಗಿದೆ.
ಇದುವರೆಗೂ ಕ್ಷೇತ್ರದ ವಿರುದ್ಧ ಏನೇ ಅಪಪ್ರಚಾರ ನಡೆದರೂ ಸುಮ್ಮನಿದ್ದ ಕ್ಷೇತ್ರದ ಪ್ರಮುಖರು, ಈಗ ಷಡ್ಯಂತ್ರ ನಡೆದಿರುವುದು ಖಚಿತವಾಗುತ್ತಲೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕ್ಷೇತ್ರದ ಪರವಾಗಿ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಮಹೇಶ್ ಕಜೆ ವಾದ ಮಂಡನೆಗೂ ಸಿದ್ಧರಾಗಿದ್ದಾರೆ. ಒಟ್ಟಿನಲ್ಲಿ ಬುರುಡೆ ಗ್ಯಾಂಗ್ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಶ್ರೀಕ್ಷೇತ್ರದ ಪರವಾಗಿಯೇ ಅರ್ಜಿ ಸಲ್ಲಿಕೆಯಾದಂತಿದೆ.















