ದೇವನಹಳ್ಳಿ: ಹೊಸಕೋಟೆ ಮತ್ತು ನೆಲಮಂಗಲದಲ್ಲಿ ಭ್ರೂಣಹತ್ಯೆ ಪ್ರಕರಣವನ್ನು ಬಯಲು ಮಾಡಿದ ಅಧಿಕಾರಿಯೊಬ್ಬರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಹೆಚ್ ಒ ಸುನೀಲ್ ಕುಮಾರ್ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಅಲ್ಲದೆ, ಕಿರುಕುಳದಿಂದ ಬೇಸತ್ತ ಅಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಹೊಸಕೋಟೆ ಮತ್ತು ನೆಮಂಗಲದಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್ ಅವರು ಬಯಲು ಮಾಡಿದ್ದರು. ಆದರೆ, ಜಿಲ್ಲಾ ಆರೋಗ್ಯಾಧಿಕಾರಿ ಸುನೀಲ್ ಕುಮಾರ್, ಜಿಲ್ಲೆಯ ಮತ್ತಷ್ಟು ಆಸ್ವತ್ರೆಗಳ ಲೋಪದೋಷ ಹಾಗೂ ಗರ್ಭಪಾತ ಕರ್ಮಕಾಂಡದ ಬಗ್ಗೆ ಬಯಲು ಮಾಡದಂತೆ ಮಂಜುನಾಥ್ ಅವರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಮೂರು ದಿನಗಳಿಗೊಮ್ಮೆ ನೋಟಿಸ್ ನೀಡುತ್ತಾ ಆಸ್ವತ್ರೆಗಳ ಲೋಪದೋಷ ವರದಿ ನೀಡದಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಂಜುನಾಥ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ನೆಲಮಂಗಲದ ಆಸರೆ ಆಸ್ವತ್ರೆಯ 74 ಗರ್ಭಪಾತದ ವರದಿ ಮಾಡದಂತೆ ಸುನೀಲ್ ಕುಮಾರ್ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಒತ್ತಡದ ನಡುವೆಯು ಆಸ್ವತ್ರೆಯ ಕರ್ಮಕಾಂಡ ಬಯಲು ಮಾಡಿ ಕೇಸ್ ದಾಖಲಿಸಿದಕ್ಕೆ ಮಂಜುನಾಥ್ ಅವರಿಗೆ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮಂಜುನಾಥ್ ಅವರು ಹೊಸಕೋಟೆಯ ಓವಂ ಆಸ್ವತ್ರೆಯಲ್ಲೂ MTP ಖಾಯ್ದೆಯಡಿ ಅನುಮತಿ ಪಡೆಯದೆ ಗರ್ಭಪಾತ ಪ್ರಕರಣ ಪತ್ತೆ ಮಾಡಿದ್ದಾರೆ. ಈ ಬಗ್ಗೆ ವರದಿ ಮಾಡಿ ಬಯಲು ಮಾಡದಂತೆ ಡಿಹೆಚ್ಒ ಸುನೀಲ್ ಅವರು ಕಿರುಕುಳ ನೀಡಿದ್ದಾಗಿ ಪತ್ರದಲ್ಲಿ ಆರೋಪಿಸಲಾಗಿದೆ.
DHO ಮಾತು ಕೇಳದಕ್ಕೆ ವಿನಾಕಾರಣ ನೋಟಿಸ್ ನೀಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಮಾನಸಿಕ ಸ್ಥೀಮಿತ ಕಳೆದುಕೊಂಡು ಜೀವ ಕಳೆದುಕೊಂಡರೆ ಡಿಹೆಚ್ ಒ ಕಾರಣ ಅಂತ ಪತ್ರದಲ್ಲಿ ಮಂಜುನಾಥ್ ಉಲ್ಲೇಖಿಸಿದ್ದಾರೆ.