ಸಂಕಷ್ಟದಲ್ಲಿರುವವರನ್ನು ಕಂಡರೆ ಮನ ಮಿಡಿಯುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇತ್ತೀಚೆಗೆ ಆಟೋ ಚಾಲಕರು ಎದುರಿಸುತ್ತಿರುವ ಎಲ್‌ಪಿಜಿ ಗ್ಯಾಸ್ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಕೇವಲ ಮಾತಿಗೆ ಸೀಮಿತವಾಗದೇ, 25 ಲಕ್ಷ ರೂಪಾಯಿ ಆರ್ಥಿಕ ನೆರವು ಕೂಡ ನೀಡುವ ಮೂಲಕ ನಟ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ನಮ್ಮ ಸಮಾಜದ ಸಾರಿಗೆ ವ್ಯವಸ್ಥೆಯಲ್ಲಿ ಆಟೋ ಚಾಲಕರ ಪಾತ್ರ ಬಹಳ ದೊಡ್ಡದು. ಇವರನ್ನ ದೇಶದ ಬೆನ್ನೆಲುಬು ಎಂದು ಕರೆದ ನಟ ಧ್ರುವ ಸರ್ಜಾ, ಪ್ರಸ್ತುತ ಅವರು ಎದುರಿಸುತ್ತಿರುವ ಎಲ್‌ಪಿಜಿ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಎಲ್‌ಪಿಜಿ ಗ್ಯಾಸ್ ಅಭಾವ ತೀವ್ರಗೊಂಡಿದೆ.
ಸಿಗುವ ಕಡೆಗಳಲ್ಲಿ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ದರಕ್ಕಿಂತ ದುಪ್ಪಟ್ಟು ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ಯಾಸ್ ಇಲ್ಲದೇ ಆಟೋಗಳು ರಸ್ತೆಗೆ ಇಳಿಯದಂತಾಗಿವೆ. ದಿನವಿಡೀ ದುಡಿದು ಸಂಜೆ ಮನೆಗೆ ಹಣ ಒಯ್ಯಬೇಕಾದ ಚಾಲಕರು ಇಂದು ಖಾಲಿ ಕೈಯಲ್ಲಿ ಮನೆಗೆ ಮರಳುತ್ತಿದ್ದಾರೆ. ಹೀಗಾಗಿ, ಚಾಲಕರ ಪರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧ್ರುವ ಸರ್ಜಾ ನೇರ ಮನವಿ ಮಾಡಿದ್ದಾರೆ.

ʻಎಲ್ರಿಗೂ ನಮಸ್ಕಾರ ನಾನು ನಿಮ್ಮ ಧ್ರುವ ಸರ್ಜಾ. ಆಟೋ ಚಾಲಕರು ನಮ್ಮ ದೇಶದ ಬೆನ್ನೆಲುಬು. ಅವರು ದಿನವೂ ದುಡಿಯುವುದು ತಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ. ಸಾರ್ವಜನಿಕವಾಗಿಯೂ ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಆದರೆ, ಇವತ್ತು ಅವರು ತಮ್ಮ ಕುಟುಂಬವನ್ನ ಸಾಕೋದಕ್ಕೂ ಭಾರೀ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಯಾಕೆಂದರೆ, ಎಲ್ಲಿಯೂ ಎಲ್‌ಪಿಜಿ ಗ್ಯಾಸ್ ಸಿಕ್ತಿಲ್ಲ. ಎಲ್ಲಾ ಕಡೆ ಆಟೋಗಳು ನಿಂತೋಗಿವೆ.
ಗ್ಯಾಸ್ ಸಿಕ್ಕಿದ್ರೂ, ಒಂದಕ್ಕೆ ಡಬಲ್ ರೇಟ್ ಇದೆ. ಇನ್ಯಾವಾಗ ಅವರು ಗ್ಯಾಸ್ ಹಾಕಿಸಿ, ಡ್ಯೂಟಿ ಮಾಡಿ, ಹೆಂಡತಿ ಮಕ್ಕಳನ್ನ ಸಾಕ್ತಾರೆ? ನನ್ನ ಮನವಿ – ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ. ನಾವು ಆ ಪಕ್ಷ, ಈ ಪಕ್ಷ ಅಂತ ಮಾತಾಡೋದು ಬೇಡ. ನೀವೆಲ್ಲ ಹಿರಿಯರಿದ್ದೀರಿ. ತಿಳಿದವರಿದ್ದೀರಿ. ಇದನ್ನ ಆದಷ್ಟು ಬೇಗ, ಬಗೆಹರಿಸಿ ಅಂತʼ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.
ವಿಡಿಯೋ ಮಾಡಿ ಮನವಿ ಮಾಡದ ಧ್ರುವ ಸರ್ಜಾ, ಆಟೋ ಚಾಲಕರ ಕಷ್ಟಕ್ಕೆ ಹೆಗಲಾಗಲು 25 ಲಕ್ಷ ರೂಪಾಯಿಗಳ ನೆರವು ನೀಡಿದ್ದಾರೆ. ಈ ಹಣವು ಸಂಕಷ್ಟದಲ್ಲಿರುವ ಚಾಲಕರ ಕುಟುಂಬಗಳಿಗೆ ಹಾಗೂ ಅವರ ಮಕ್ಕಳಿಗೆ ನೆರವಾಗಲಿ ಎಂಬ ಆಶಯ ಅವರದ್ದು. ನಟನ ಈ ಸಾಮಾಜಿಕ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.















