ಬೆಂಗಳೂರು(Bengaluru): ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ʼನಮ್ಮ ಕ್ಲಿನಿಕ್ʼ ಮೂಲಕ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹದ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಸಿಟಿ ಸಮ್ಮಿಟ್’ನಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಅಸಾಂಕ್ರಾಮಿಕ ರೋಗಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದರ ನಿರ್ವಹಣೆಗೆ ನಗರಗಳಲ್ಲಿ 438 ʼನಮ್ಮ ಕ್ಲಿನಿಕ್ʼಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಕೊಳೆಗೇರಿ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಕ್ಲಿನಿಕ್ ಆರಂಭಿಸಿ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.
ಈ ಮೂಲಕ ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳಿರುವ ಜನರ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಒಟ್ಟು ಮಧುಮೇಹಿಗಳಲ್ಲಿ 75% ಜನರು ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ. ಆದ್ದರಿಂದ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಮಧುಮೇಹ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ.
6,500 ಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇವುಗಳ ಮೂಲಕ ಕೂಡ ಮಧುಮೇಹ ತಪಾಸಣೆ ಮಾಡಲಾಗುವುದು. 200 ಕ್ಕೂ ಅಧಿಕ ನಮ್ಮ ಕ್ಲಿನಿಕ್ ಸಿದ್ಧವಾಗಿದ್ದು, ತಿಂಗಳಾಂತ್ಯದಲ್ಲಿ ಬೇರೆ ಪ್ರದೇಶಗಳಲ್ಲಿ 100 ಹಾಗೂ ಒಂದು ವಾರದ ಬಳಿಕ ಬೆಂಗಳೂರು ನಗರದಲ್ಲಿ ಕ್ಲಿನಿಕ್ ಉದ್ಘಾಟಿಸಲಾಗುವುದು ಎಂದು ವಿವರಿಸಿದರು.
30 ವರ್ಷ ವಯಸ್ಸಿನ ಮಧುಮೇಹಿಯೊಬ್ಬರು ಗ್ಯಾಂಗ್ರಿನ್’ನಿಂದ ಕಾಲಿಗೆ ಹಾನಿ ಮಾಡಿಕೊಂಡಿದ್ದರು. ಆದರೆ ಅವರಿಗೆ ಮಧುಮೇಹ ಇದೆ ಎಂಬುದೇ ಗೊತ್ತಿರಲಿಲ್ಲ. ಇಂತಹ ನಿರ್ಲಕ್ಷ್ಯ, ಜಾಗೃತಿಯ ಕೊರತೆ ಎಲ್ಲೆಡೆ ಕಂಡುಬರುತ್ತಿದೆ. ಪ್ರತಿ ವರ್ಷ ಆರೋಗ್ಯ ತಪಾಸಣೆಯನ್ನು ಕೂಡ ಜನರು ಮಾಡಿಕೊಳ್ಳುವುದಿಲ್ಲ. ಜನರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
50% ಜನರಿಗೆ ಆರೋಗ್ಯ ತಪಾಸಣೆ
ಕಳೆದ ಮೂರು ವರ್ಷಗಳಲ್ಲಿ ರಾಜ್ಯದ 50% ಜನರನ್ನು ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ಒಳಪಡಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ರಾಜ್ಯದ 100% ಜನರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬುದು ನನ್ನ ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಆರಂಭಿಸಿದ ಇ ಮನಸ್ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮಾದರಿಯಾಗಿಸಿಕೊಂಡು ಹೊಸ ಕಾರ್ಯಕ್ರಮ ಆರಂಭಿಸಿದೆ. ಅನೇಕರಿಗೆ ಮಾನಸಿಕ ಸಮಸ್ಯೆ ಇದೆ ಎಂದೇ ಗೊತ್ತಿರುವುದಿಲ್ಲ. ಕ್ಯಾನ್ಸರ್ ವಿಚಾರದಲ್ಲೂ ಹೀಗೆಯೇ ಆಗುತ್ತಿದೆ. ಕಿದ್ವಾಯಿ ಸಂಸ್ಥೆ ಮೂಲಕ ಕ್ಯಾನ್ಸರ್ ಬಗ್ಗೆ ಹೆಚ್ಚು ಅರಿವು ಮೂಡಿಸಲಾಗುತ್ತಿದೆ. ರೋಗ ಬರುವುದಕ್ಕಿಂತ ಮೊದಲು ರೋಗ ಪೂರ್ವದ ನಿಯಂತ್ರಣ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಬೆಂಗಳೂರು ನಗರ ಐಟಿ ನಗರವಾಗಿ ಅಭಿವೃದ್ಧಿಯಾಗಿದೆ. ಈಗ ಇದು ಆರೋಗ್ಯ ನಗರವಾಗಿ ಬೆಳೆಯುತ್ತಿದೆ. 1.3 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಕಳೆದ ಎರಡು ಮೂರು ದಶಕಕ್ಕೆ ಹೋಲಿಸಿದರೆ ಈಗ ಜನರ ಗರಿಷ್ಠ ವಯೋಮಿತಿ ಹೆಚ್ಚಾಗಿದೆ. ಹಿಂದೆ 40-52 ವಯೋಮಿತಿ ಇದ್ದು, ಈಗ 65-67 ಆಗಿದೆ. ವಯೋಮಿತಿ ಹೆಚ್ಚಳದ ಮೂಲಕ ನಾವು ಅಭಿವೃದ್ಧಿ ಸಾಧಿಸಿದ್ದೇವೆ ಎನ್ನಬಹುದು. ಆದರೆ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಎಷ್ಟು ಆರೋಗ್ಯಕರವಾಗಿ ಬದುಕುತ್ತೇವೆ ಎಂಬುದು ಮುಖ್ಯ ಎಂದರು.
ಕೋವಿಡ್ ಸಾಂಕ್ರಾಮಿಕವನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ವಾಸ್ತವದಲ್ಲಿ ಸಾಂಕ್ರಾಮಿಕಕ್ಕಿಂತ ಅಸಾಂಕ್ರಾಮಿಕ ರೋಗಗಳೇ ಹೆಚ್ಚು ಸಮಾಜವನ್ನು ಕಾಡುತ್ತಿವೆ. ಅಭಿವೃದ್ಧಿಶೀಲ ಹಾಗೂ ಹಿಂದುಳಿದ ದೇಶಗಳಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚು ದುಷ್ಪರಿಣಾಮ ಬೀರುತ್ತಿವೆ. ಅದರಲ್ಲೂ ಭಾರತದಲ್ಲಿ ಮಧುಮೇಹ ಹೆಚ್ಚು ಜನರನ್ನು ಕಾಡುತ್ತಿದೆ. ಸಂಸ್ಕರಿತ ಸಕ್ಕರೆ ಬಹಳ ಹಿಂದೆ ದೇಶದಲ್ಲಿ ಕಂಡುಬಂದಿತ್ತು ಎಂದರು.
ಮಕ್ಕಳು ಫಾಸ್ಟ್ ಫುಡ್‌ಗೆ ಬೇಗನೆ ಹೊಂದಿಕೊಳ್ಳುತ್ತಿದ್ದಾರೆ. ಮಕ್ಕಳು ಹೊರಗೆ ಆಟವಾಡುವುದು ಕೂಡ ಕಡಿಮೆಯಾಗಿದೆ. ಹಿಂದಿನ ಜನಾಂಗ ಹೆಚ್ಚು ಆಟ, ಓಡಾಟ ಮಾಡುತ್ತಿದ್ದರು. ಇದರಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲವಾಗಿದ್ದರು. ಈ ಬಗ್ಗೆ ಹೆಚ್ಚು ಜಾಗೃತಿ ಈಗ ಅಗತ್ಯವಿದೆ ಎಂದರು.
ನರ್ಸಿಂಗ್ ಸಂಸ್ಥೆಗಳ ಪರಿಶೀಲನೆ
ನಮ್ಮ ಸರ್ಕಾರದಿಂದ ಒಂದೇ ಒಂದು ನರ್ಸಿಂಗ್- ಜಿಎನ್’ಎಮ್ ಸಂಸ್ಥೆಗೆ ಪರವಾನಗಿ ನೀಡಿಲ್ಲ. ಆದರೆ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಆದರೆ ಬಳಿಕ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ. ಹಿಂದಿನ ಸರ್ಕಾರದಲ್ಲಿ ಯಾವುದೇ ಮೂಲಸೌಕರ್ಯವನ್ನು ಪರಿಶೀಲಿಸದೆ ಕೆಲ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 850 ನರ್ಸಿಂಗ್ ಕಾಲೇಜುಗಳಿವೆ. ಸರ್ಕಾರದಿಂದ ಒಂದು ಸಮಿತಿ ರಚಿಸಿ ಈ ಎಲ್ಲಾ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ. ಆ ಸಮಿತಿಯಿಂದ ವರದಿ ಪಡೆದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.