ಹುಬ್ಬಳ್ಳಿ(Hubballi)– ಕೋವಿಡ್ (Covid)ಸೋಂಕಿತರ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ. ಆದರೆ 4ನೇ ಅಲೆ ಬಂದಿಲ್ಲ. ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.9ರ ನಂತರ ಕೋವಿಡ್ ಸೋಂಕಿತರ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ, ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಕೋವಿಡ್ ಲಸಿಕೆ ತೆಗೆದುಕೊಳ್ಳದಿರುವ ಯುರೋಪ್ ಮತ್ತು ಇತರ ರಾಷ್ಟ್ರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ನಮ್ಮ ರಾಜ್ಯದಲ್ಲಿ ಶೇ.78 ರಷ್ಟು ಮಂದಿ ಕೋವಿಡ್ ನ ಎರಡೂ ಡೋಸ್ ಗಳನ್ನು ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ಕೊರೊನಾ 4ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೂಸ್ಟರ್ ಡೋಸ್ ಗಳನ್ನು ನೀಡುವ ಬಗ್ಗೆ ಇನ್ನಷ್ಟು ಗಮನ ಹರಿಸುತ್ತೇವೆ. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ಹೆಚ್ಚೆಚ್ಚು ನೀಡುವ ಬಗ್ಗೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ಕೊರೋನಾ ಟೆಸ್ಟ್ ಗಳನ್ನು ಹೆಚ್ಚೆಚ್ಚು ಮಾಡುತ್ತೇವೆ ಎಂದು ವಿವರಿಸಿದರು.
ILI (ಇನ್‌ಫ್ಲುಯೆಂಜಾ ತರಹದ ಅನಾರೋಗ್ಯ) ಮತ್ತು SARI (ತೀವ್ರವಾದ ಉಸಿರಾಟದ ಸೋಂಕುಗಳು) ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದವರು ಮತ್ತು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರ ಮಾದರಿಗಳ ಮೇಲೆ ಜಿನೋಮ್ ಸೀಕ್ವೆನ್ಸಿಂಗ್ ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವೈರಸ್‌ನ ರೂಪಾಂತರವನ್ನು ಗುರುತಿಸುವ ಮೂಲಕ ಚಿಕಿತ್ಸೆಯ ಮಾರ್ಗವನ್ನು ನಿರ್ಧರಿಸಲು ಜಿನೋಮ್ ಸೀಕ್ವೆನ್ಸಿಂಗ್ ಸಹಾಯ ಮಾಡುತ್ತದೆ. ಈಗಾಗಲೇ ರಾಜ್ಯದಲ್ಲಿ ಎಂಟು ಲ್ಯಾಬ್‌ಗಳಲ್ಲಿ ಸುಮಾರು 8,500 ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದೆ. ಅವರಲ್ಲಿ ಸುಮಾರು 4,000 ಬೆಂಗಳೂರಿನವರು ಮತ್ತು ಉಳಿದವರು ಇತರ ಜಿಲ್ಲೆಗಳಿಂದ ಬಂದವರು ಎಂದು ಬೊಮ್ಮಾಯಿ ಹೇಳಿದರು.