ಮನೆ ಅಪರಾಧ ಪುದುವೆಟ್ಟು ಪೈಪ್‌ ಲೈನ್‌ ನಲ್ಲಿ ಡೀಸೆಲ್‌ ಕಳವು ಪ್ರಕರಣ; ಐವರು ಆರೋಪಿಗಳ ಬಂಧನ

ಪುದುವೆಟ್ಟು ಪೈಪ್‌ ಲೈನ್‌ ನಲ್ಲಿ ಡೀಸೆಲ್‌ ಕಳವು ಪ್ರಕರಣ; ಐವರು ಆರೋಪಿಗಳ ಬಂಧನ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ಡೀಸೆಲ್‌ ಪೈಪ್‌ ಲೈನ್‌ ಕೊರೆದು 9 ಲಕ್ಷ ರೂ. ಮೌಲ್ಯದ ಡೀಸೆಲ್‌ ಕಳವು ಮಾಡಿದ ಪ್ರಕರಣ ಸಂಬಂಧ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

Join Our Whatsapp Group

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ದಿನೇಶ್‌ ಗೌಡ (40), ಮೋಹನ್‌ (28), ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ನೆಲ್ಯಾಡಿ ನಿವಾಸಿ ಜಯ ಸುವರ್ಣ(39), ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹರೆಹಳ್ಳಿಯ ನಿವಾಸಿ ದಿನೇಶ್‌ (40), ಕಡಬ ತಾಲೂಕಿನ ಕಡಬ ಗ್ರಾಮದ ಕಾರ್ತಿಕ್‌(28) ಬಂಧಿತ ಆರೋಪಿಗಳು.

ಆರೋಪಿಗಳನ್ನು ಎ. 1ರಂದು ನೆಲ್ಯಾಡಿಯಲ್ಲಿ ವಶಕ್ಕೆ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು 4 ದಿನ ಪೊಲೀಸ್‌ ವಶಕ್ಕೆ ನೀಡಲಾಗಿತು. ಎ. 4ರಂದು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ವಶಪಡಿಸಿಕೊಂಡ ಸೊತ್ತುಗಳು ಕೃತ್ಯಕ್ಕೆ ಬಳಸಿದ್ದ ಮಾರುತಿ 800 ಕಾರು, 100 ಲೀಟರ್‌ ಡೀಸೆಲ್, ಪೈಪುಗಳು, ಕೊರೆಯುವ ಯಂತ್ರ, ವೈಂಡಿಂಗ್‌ ಮೆಷಿನ್‌, ಮೊಬೈಲ್‌ ಫೋನ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ವಸಂತ ಅಚಾರ್‌ ನೇತೃತ್ವದ ಧರ್ಮಸ್ಥಳ ಉಪನಿರೀಕ್ಷಕ ಅನಿಲ್‌ ಕುಮಾರ್‌, ಸಮರ್ಥ್ ಆರ್‌. ಗಾಣಿಗೇರ ಮತ್ತು ಅವರ ತಂಡದ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ‌

ಏನಿದು ಪ್ರಕರಣ?: ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್‌ ಪೈಪ್‌ ಮೂಲಕ ಡೀಸೆಲ್‌ ಸರಬರಾಜು ಆಗುತ್ತಿದ್ದು, ಮಾ. 16ರ ರಾತ್ರಿಯಿಂದ ಮಾ. 19ರ ರಾತ್ರಿಯ ಮಧ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ಯಾರೋ ಕಳ್ಳರು ಡೀಸೆಲ್‌ ಪೈಪ್‌ಲೈನ್‌ನಲ್ಲಿ ರಂಧ್ರ ಕೊರೆದು 2.5 ಇಂಚು ಎಚ್‌ ಡಿಪಿಇ ಪೈಪ್‌ ಮೂಲಕ ಅಂದಾಜು 12,000 ಲೀ. ಡೀಸೆಲ್‌ ಅನ್ನು ಕಳವು ಮಾಡಿದ್ದರು. ಕಳವಾದ ಡೀಸೆಲ್‌ನ ಮೌಲ್ಯ 9,60,000 ರೂ. ಆಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.