ಬೆಂಗಳೂರು: ಜೆಮ್ ಓಪನ್ ಕ್ಯೂಬ್ ಟೆಕ್ನಾಲಜೀಸ್ ನಿಂದ ಕರ್ನಾಟಕದಲ್ಲಿ ಡಿಜಿಟಲ್ ಚಾಯ್ ಎಟಿಎಂ ಎಂದು ಕರೆಯಲ್ಪಡುವ ರಾಜ್ಯದ ಮೊದಲ ಡಬ್ಲ್ಯುಟಿಸಿ ಯಂತ್ರವನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬಿಡುಗಡೆ ಮಾಡಿದರು.
ನಗರದ ಕ್ಯಾಪಿಟಲ್ ಹೋಟೆಲ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವರು ಡಿಜಿಟಲ್ ಚಾಯ್ ಎಟಿಎಂಗೆ ಚಾಲನೆ ನೀಡಿ ಮಾತನಾಡಿ, ಡಿಜಿಟಲ್ ಚಾಯ್ ತಂತ್ರಜ್ಞಾನ ಬರುವ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ನಿರೀಕ್ಷೆ ಇದೆ. ವೃತ್ತಿಜೀವನದ ಬೆಳವಣಿಗೆಗಾಗಿ ಯುವ ಸಮೂಹ ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಳ್ಳಬೇಕು. ಪ್ರಗತಿ ಮತ್ತು ನಾವೀನ್ಯತೆಯನ್ನು ಸಂಕೇತಿಸುವ ಈ ಯಂತ್ರ ಚಹಾ ಉದ್ಯಮದ ಭವಿಷ್ಯವನ್ನು ಉಜ್ವಲಗೊಳಿಸಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ನಾವೀನ್ಯತೆಯಿಂದ ಕೌಶಲ್ಯ ಅಭಿವೃದ್ಧಿಪಡಿಸಿಕೊಂಡರೆ ಉತ್ತಮ ಅವಕಾಶಗಳು ದೊರೆಯಲಿವೆ. ಜಗತ್ತಿನಲ್ಲಿ ಕರ್ನಾಟಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದರು.
ಜೆಮ್ ಓಪನ್‌ಕ್ಯೂಬ್ ಟೆಕ್ನಾಲಜೀಸ್‌ನ ಸಿಇಒ ವಿನೋದ್ ಕುಮಾರ್ ಮಾತನಾಡಿ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಬಸ್, ಮೆಟ್ರೋ ನಿಲ್ದಾಣಗಳಲ್ಲಿ ಈ ಯಂತ್ರಗಳು ಜನಪ್ರಿಯತೆ ಪಡೆದುಕೊಂಡಿವೆ. ಕರ್ನಾಟಕದಾದ್ಯಂತ ಇದಕ್ಕೆ ಬೇಡಿಕೆ ಇದೆ. ಇದು ಡಬಲ್ ಡೋರ್ ರೆಫ್ರಿಜರೇಟರ್ ಗಿಂತ ಕಡಿಮೆ ವೆಚ್ಚವಾಗಲಿದ್ದು, ಪ್ರತಿದಿನ ಸರಾಸರಿ 2000 ರೂ ಆದಾಯ ಗಳಿಸಲು ಸಹಕಾರಿಯಾಗಿದೆ. ಚಹಾ, ಕಾಫಿ, ಲೆಮನ್ ಟೀ, ಬಾದಾಮಿ ಹಾಲು ಸೇರಿದಂತೆ ತಿಂಡಿಗಳು ಮತ್ತು ನೀರಿನ ಬಾಟಲಿಗಳ ಜೊತೆಗೆ ವೈವಿಧ್ಯಮಯ ಪಾನೀಯಗಳನ್ನು ಈ ಯಂತ್ರದ ಮೂಲಕ ಪೂರೈಸಬಹುದಾಗಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡ ಮತ್ತಿತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.