ಮನೆ ಕಾನೂನು ಡಿಜಿಟಲ್‌ ಸಹಿ ಹೊಂದಿರುವ ತೀರ್ಪಿನ ಪ್ರತಿಗಳು ಸುಲಭವಾಗಿ ಸಿಗಬೇಕು: ಸುಪ್ರೀಂ ಕೋರ್ಟ್‌

ಡಿಜಿಟಲ್‌ ಸಹಿ ಹೊಂದಿರುವ ತೀರ್ಪಿನ ಪ್ರತಿಗಳು ಸುಲಭವಾಗಿ ಸಿಗಬೇಕು: ಸುಪ್ರೀಂ ಕೋರ್ಟ್‌

0

ತೀರ್ಪುಗಳ ಮುದ್ರಿಸಿದ ಪ್ರತಿಗಳನ್ನು ಸ್ಕ್ಯಾನ್‌ ಮಾಡಿ ಸಂಬಂಧಿತ ನ್ಯಾಯಾಲಯ ಮತ್ತು ನ್ಯಾಯ ಮಂಡಳಿಯ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್‌ ಮಾಡುವುದನ್ನು ತಪ್ಪಿಸುವಂತೆ ನ್ಯಾಯಾಲಯಗಳು ಮತ್ತು ನ್ಯಾಯ ಮಂಡಳಿಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಡಿಜಿಟಲ್‌ ಸಹಿಗಳನ್ನು ಹೊಂದಿರುವ ತೀರ್ಪಿನ ಪ್ರತಿಗಳು ಸುಲಭವಾಗಿ ದಕ್ಕುವಂತೆ ನ್ಯಾಯಾಂಗ ಸಂಸ್ಥೆಗಳು ಖಾತರಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಸ್‌ ಬೋಪಣ್ಣ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.

“ಅಪ್‌ಲೋಡ್‌ ಮಾಡಲಾದ ನ್ಯಾಯಾಲಯಗಳ ಆದೇಶ ಮತ್ತು ತೀರ್ಪುಗಳು ಸುಲಭವಾಗಿ ದಕ್ಕುವಂತಿರಬೇಕು. ಹಾಗೆಯೇ, ಅವುಗಳು ಡಿಜಿಟಲ್‌ ಸಹಿಗಳನ್ನು ಹೊಂದಿರಬೇಕು. ತೀರ್ಪಿನ ಪ್ರತಿಗಳು ಮುದ್ರಿತ ಸ್ಕ್ಯಾನ್‌ ಪ್ರತಿಗಳಾಗಿರಬಾರದು” ಎಂದು ಪೀಠ ಹೇಳಿದೆ.

ತೀರ್ಪಿನ ಪ್ರತಿಗಳನ್ನು ಮುದ್ರಿಸಿ, ಆನಂತರ ಅವುಗಳನ್ನು ಸ್ಕ್ಯಾನ್‌ ಮಾಡುವುದು ಹೆಚ್ಚು ಸಮಯ ಹಿಡಿಯುವ ಪ್ರಕ್ರಿಯೆಯಾಗಿದ್ದು, ಇದು ಯಾವುದೇ ಉದ್ದೇಶವನ್ನು ಈಡೇರಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ದಾವೆ ಪ್ರಕ್ರಿಯೆಯಲ್ಲಿ ಈ ಚಟುವಟಿಕೆಯನ್ನು ನಿರ್ಮೂಲನೆ ಮಾಡಬೇಕಿದೆ. ಇದು ದಾಖಲೆಗಳು ಮತ್ತು ಇತರ ಪ್ರಕ್ರಿಯೆಗಳು ಜನರಿಗೆ ಸುಲಭವಾಗಿ ದೂರುವಿರುವಂತೆ ಮಾಡುತ್ತದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಕೇಂದ್ರ ಕೈಗಾರಿಕಾ ನ್ಯಾಯ ಮಂಡಳಿಯ 2019ರ ಆದೇಶವನ್ನು 2020ರಲ್ಲಿ ಎತ್ತಿ ಹಿಡಿದಿದ್ದ ಹಿಮಾಚಲ ಪ್ರದೇಶ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನ ಆದೇಶ ಮಾಡಿದೆ.