ನವದೆಹಲಿ(Newdelhi): ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ಬದಲಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆ ಬೆಂಬಲಿಸುವುದಾಗಿ ದಿಗ್ವಿಜಯ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.
ನನ್ನ ಜೀವನದುದ್ದಕ್ಕೂ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಅದನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.
ಖರ್ಗೆ ಅವರು ನನ್ನ ನಾಯಕರು. ನನಗಿಂತಲೂ ಹಿರಿಯರು. ಚುನಾವಣೆಗೆ ಸ್ಪರ್ಧಿಸಲು ಬಯಸುತ್ತೀರಾ ಎಂದು ನಾನು ಅವರನ್ನು ನಿನ್ನೆ ಕೇಳಿದ್ದೆ. ಅವರು ಇಲ್ಲ ಎಂದು ಹೇಳಿದರು. ಇಂದು ಅವರನ್ನು ಮತ್ತೆ ಭೇಟಿ ಮಾಡಿದೆ. ನೀವು ಸ್ಪರ್ಧಿಸಿದರೆ ನಾನು ಸಂಪೂರ್ಣವಾಗಿ ನಿಮ್ಮೊಂದಿಗಿರುತ್ತೇನೆ ಎಂದು ಹೇಳಿದೆ. ಅವರ ವಿರುದ್ಧ ನಾನು ಸ್ಪರ್ಧಿಸುವುದನ್ನು ಯೋಚಿಸಲು ಸಾಧ್ಯವಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಾನು ಅವರ ನಾಮಪತ್ರವನ್ನು ಬೆಂಬಲಿಸುತ್ತೇನೆ ಎಂದು ಸಿಂಗ್ ಹೇಳಿದರು.
ನನ್ನ ಜೀವನದಲ್ಲಿ ಕೆಲವು ವಿಚಾರಗಳಿಗೆ ರಾಜಿ ಎಂಬುದಿಲ್ಲ. ದಲಿತ, ಬುಡಕಟ್ಟು ಮತ್ತು ಒಬಿಸಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಕೋಮು ಸೌಹಾರ್ದವನ್ನು ಹಾಳು ಮಾಡುವವರೊಂದಿಗೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಹಾಗೆಯೇ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ನನ್ನ ಬದ್ಧತೆಯಲ್ಲಿಯೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹೊರಗುಳಿದ ನಂತರ, ದಿಗ್ವಿಜಯ್ ಸಿಂಗ್ ಅವರು ತಾವು ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಗುರುವಾರ 10 ಸೆಟ್ ಅರ್ಜಿ ಪಡೆದುಕೊಂಡಿದ್ದರು.
ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸಿದರೆ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಬೇಕು ಎಂದು ಗೆಹಲೋತ್ ಅವರಿಗೆ ಸೂಚಿಸಲಾಗಿತ್ತು. ಅಂದಹಾಗೆ, ಈಗ ‘ಒಬ್ಬರಿಗೆ ಒಂದೇ ಹುದ್ದೆ’ ನಿಯಮ ಖರ್ಗೆ ಅವರಿಗೂ ಅನ್ವಯ ಆಗಲಿದೆ. ಖರ್ಗೆ ಸದ್ಯ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ.