ಮನೆ ರಾಜಕೀಯ ಧರ್ಮದ ಅಮಲು ತಲೆಗೇರಿಸಿಕೊಂಡಿರುವ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ: ದಿನೇಶ್ ಗುಂಡೂರಾವ್ ಪ್ರಶ್ನೆ

ಧರ್ಮದ ಅಮಲು ತಲೆಗೇರಿಸಿಕೊಂಡಿರುವ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ: ದಿನೇಶ್ ಗುಂಡೂರಾವ್ ಪ್ರಶ್ನೆ

0

ಬೆಂಗಳೂರು: ಧರ್ಮದ ಅಮಲು ತಲೆಗೇರಿಸಿಕೊಂಡಿರುವ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ? ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ಭಗವದ್ಗೀತೆಯ ತತ್ವಕ್ಕೆ ವಿರುದ್ಧವಾಗಿ ಮನುಷ್ಯ ದ್ವೇಷ ಪಸರಿಸುತ್ತಿರುವ ಬಿಜೆಪಿಯವರು ನಿಜವಾದ ಧರ್ಮದ್ರೋಹಿಗಳು ಎಂದು ಹೇಳಿದ್ದಾರೆ.

 ‘ರಾಜ್ಯದ ಅಭಿವೃದ್ಧಿಯನ್ನು ಕಾಲ ಕಸ‌ ಮಾಡಿಕೊಂಡಿರುವ ರಾಜ್ಯ ಸರ್ಕಾರ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧದ ಭಜನೆ ಮಾಡುತ್ತಿದೆ. ಸಾಧನೆಯ ಆಧಾರದಲ್ಲಿ ಜನರ ಮುಂದೆ ಹೋಗಲು ಈ ಸರ್ಕಾರಕ್ಕೆ ಮುಖವಿಲ್ಲ. ಹಾಗಾಗಿ ಮುಗ್ದ ಜನರಿಗೆ ಧರ್ಮದ ಕಣ್ಕಾಪು ಕಟ್ಟಿ ಮೂರ್ಖರನ್ನಾಗಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.

 ‘ಈ ಸರ್ಕಾರದಲ್ಲಿ ಶೇ 40 ಕಮೀಷನ್ ದಂಧೆ ನಿರಂತರವಾಗಿ ನಡೆಯುತ್ತಿದೆ. ಸಚಿವ ಈಶ್ವರಪ್ಪ ಕಮೀಷನ್ ಕೇಳಿದ ಬಗ್ಗೆ ಗುತ್ತಿಗೆದಾರರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ಈಶ್ವರಪ್ಪ ವಿರುದ್ಧ ಯಾವುದೇ ಕ್ರಮವಿಲ್ಲ. ಸಂಪುಟದಲ್ಲಿ ಲಂಚಕೋರರ ಗುಂಪೇ ಇದೆ. ಕಮೀಷನ್ ದಂಧೆಯ ವಿಚಾರ ಮರೆಮಾಚಲು ಈ ಸರ್ಕಾರ ಧರ್ಮದ ಅಸ್ತ್ರ ಬಳಸಿ ನಾಟಕವಾಡುತ್ತಿದೆ’ ಎಂದು ದಿನೇಶ್‌ ಗೂಂಡುರಾವ್‌ ಟೀಕಿಸಿದ್ದಾರೆ. ‘ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಪಾಲು ಬಂದಿಲ್ಲ. ಇತ್ತ ರಾಜ್ಯ ₹15 ಸಾವಿರ ಕೋಟಿ ರಾಜಸ್ವ ಕೊರತೆಯಲ್ಲಿದೆ. ಸರ್ಕಾರಕ್ಕೆ ಈ ವಿಚಾರಗಳು ಅಪ್ರಸ್ತುತವಾಗಿರುವುದು ದುರಂತ. ಕೇಂದ್ರದಿಂದ ಜಿಎಸ್‌ಟಿ ಪಾಲು ಕೇಳಲು ರಾಜ್ಯ ಬಿಜೆಪಿ ನಾಯಕರಿಗೆ ಧಮ್ ಇಲ್ಲ. ಆದರೆ, ಸದಾಕಾಲ ಧರ್ಮ ದೇವರು ಎಂದು ಹೇಳಿಕೊಂಡು ಕಲಹ ಸೃಷ್ಟಿಸಿ ರಾಜಕಾರಣ ಮಾಡುತ್ತಿದೆ’ ಎಂಬುದಾಗಿ ಅವರು ಟ್ವೀಟಿಸಿದ್ದಾರೆ. ‘ಭಗವದ್ಗೀತೆ, ಬೈಬಲ್, ಕುರಾನ್ ಸೇರಿದಂತೆ ಎಲ್ಲಾ ಗ್ರಂಥಗಳ ಸಾರವೇ ಶಾಂತಿ ಮತ್ತು ಪ್ರೀತಿ. ಯಾವ ಧರ್ಮವೂ ಮನುಷ್ಯ ದ್ವೇಷದ ಬೋಧನೆ ಮಾಡಿಲ್ಲ. ಗ್ರಂಥಗಳ ಸಾರ ಗೊತ್ತಿಲ್ಲದ ಬಿಜೆಪಿಯವರು ಜನರ ಮನಸ್ಸಿನಲ್ಲಿ ಧರ್ಮದ ವಿಷಬೀಜ ಬಿತ್ತುತ್ತಿದ್ದಾರೆ. ಭಗವದ್ಗೀತೆಯ ತತ್ವಕ್ಕೆ ವಿರುದ್ಧವಾಗಿ ಮನುಷ್ಯ ದ್ವೇಷ ಪಸರಿಸುತ್ತಿರುವ ಬಿಜೆಪಿಯವರು ನಿಜವಾದ ಧರ್ಮದ್ರೋಹಿಗಳು’ ಎಂದು ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.