ಕಲಬುರಗಿ: ಗದಗದ ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಸೇರಿ ಸ್ಪರ್ಧಿಸುವ ವಿಚಾರವಿನ್ನು ಅಂತಿಮಗೊಂಡಿಲ್ಲ. ಸದ್ಯಕ್ಕೆ ಆ ವಿಚಾರ ಪಕ್ಷದ ಮುಂದೆ ಇಲ್ಲ. ಅವರು ಸ್ವತಂತ್ರವಾಗಿ ಕಣಕ್ಕಿಳಿಯಲು ಅರ್ಹರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮಿಜಿ ಅವರು ಪಕ್ಷ ಸೇರ್ಪಡೆಗೆ ಒಲವು ತೋರಿದ್ದರು. ನಾನು ಉತ್ಸಾಹಿತನಾಗಿದ್ದೆ. ಆದರೆ ಕೊನೆ ಘಳಿಗೆಯ ನಿರ್ಧಾರಗಳು ಪಕ್ಷದಲ್ಲಿ, ಕ್ಷೇತ್ರದಲ್ಲಿ ವಿರೋಧಾಭಾಸ ಆಗದಿರಲಿ ಎನ್ನುವ ಕಾರಣಕ್ಕೆ ವಿಚಾರ ಕೈಬಿಡಲು ಹಂತದಲ್ಲಿದೆ ಎಂದಾಗ, ಸಿಎಂ ಸಿದ್ದರಾಮಯ್ಯ ವಿರೋಧಕ್ಕಾಗಿಈ ನಿರ್ಧಾರವೇ ಎಂದು ಕೇಳಿದಾಗ, ಅಂತಹದ್ದೇನು ವಿರೋಧವಿಲ್ಲ ಎಂದಷ್ಟೇ ಹೇಳಿದರು.
ನಮ್ನ ಅಭ್ಯರ್ಥಿ ರಾಧಾಕೃಷ್ಣ ಅವರು ಖಂಡಿತವಾಗಿ ಗೆಲವು ಸಾಧಿಸಲಿದ್ದಾರೆ. ಅವರಿಗೆ ಸಾಕಷ್ಟು ಅಭಿವೃದ್ಧಿ ಹಾಗೂ ವಿಕಾಸದ ಚಿಂತನೆ ಇದೆ. ಅದಕ್ಕಾಗಿ ಅವರನ್ನು ಗೆಲ್ಲಿಸಿದಲ್ಲಿ ಅವರೂ ಕೂಡ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆಯ ಶುರುವಾಗಲಿದೆ ಎಂದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರಿಗೆ ಬಿಜೆಪಿಯಲ್ಲಿ ಬಹಳ ದೊಡ್ಡ ಅನ್ಯಾಯವಾಗಿದೆ. ಅವರು ಪುನಃ ಬರುವ ವಿಚಾರದಲ್ಲಿದ್ದಾರೆ. ಅವರ ಮತ್ತು ನಮ್ಮ ಮಧ್ಯೆ ಕೆಲವು ಮಾತುಕತೆಗಳಾಗಿವೆ. ಅದನ್ನು ಈಗ ಹೇಳುವುದು ಸರಿಯಲ್ಕ ಎಂದರು.
ಒಂದು ವರ್ಷದಲ್ಲಿ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ ಎನ್ನುವ ಎಚ್ಡಿಕೆ ಅವರ ಮಾತಿನ ಅರ್ಥವೇನು ಎಂದು ಕೇಳಿದಾಗ, ಏನಿಲ್ಲ ಅವರು ತಮ್ಮ ವಿಚಾರ ಮಾತಾಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಮುರಿಯಲಿದೆ. ಬಿಜೆಪಿ ನಮ್ಮನ್ನು ಓಡಿಸಲಿದ್ದಾರೆ ಎನ್ನುವ ಭವಿಷ್ಯ ಹೇಳಿಕೊಂಡಿದ್ದಾರೆಂದು ತಿರುಗೇಟು ನೀಡಿದರು.
ಇದಕ್ಕಿಂತಲೂ ದೊಡ್ಡ ಬದಲಾವಣೆ ಎಂದರೆ, ಜೆಡಿಎಸನ್ನೇ ಬಿಜೆಪಿಯಲ್ಲಿ ವಿಲೀನ ಮಾಡಬಹುದು ಎಂದರು.