ಮನೆ ಕಾನೂನು ನೇಮಕಾತಿಯಲ್ಲಿ ಪುರುಷರ ವಿರುದ್ಧ ತಾರತಮ್ಯ: 1996ರ ಸರ್ಕಾರಿ ಆದೇಶ ರದ್ದುಗೊಳಿಸಿದ ರಾಜಸ್ಥಾನ ಹೈಕೋರ್ಟ್

ನೇಮಕಾತಿಯಲ್ಲಿ ಪುರುಷರ ವಿರುದ್ಧ ತಾರತಮ್ಯ: 1996ರ ಸರ್ಕಾರಿ ಆದೇಶ ರದ್ದುಗೊಳಿಸಿದ ರಾಜಸ್ಥಾನ ಹೈಕೋರ್ಟ್

0

ಅನುಕಂಪ ಆಧಾರಿತ ಕೆಳ ವಿಭಾಗದ ಗುಮಾಸ್ತ ಹುದ್ದೆಗಳಿಗೆ ಕೇವಲ ಮಹಿಳೆಯರನ್ನೇ ನೇಮಕ ಮಾಡಿ ರಾಜಸ್ಥಾನ ರಾಜ್ಯ ವಿದ್ಯುತ್ ಮಂಡಳಿ 1996ರ ಅಕ್ಟೋಬರ್ ನಲ್ಲಿ ಹೊರಡಿಸಿದ್ದ ಆದೇಶವನ್ನು ಈಚೆಗೆ ರದ್ದುಗೊಳಿಸಿರುವ ರಾಜಸ್ಥಾನ ಹೈಕೋರ್ಟ್, ಸರ್ಕಾರ ಪುರುಷರ ವಿರುದ್ಧ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದೆ .

Join Our Whatsapp Group

[ಆಶಿಶ್ ಅರೋರ ಮತ್ತು ರಾಜಸ್ಥಾನ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ನಡುವಣ ಪ್ರಕರಣ].

ಸಂವಿಧಾನದ 14 ಮತ್ತು 16ನೇ ವಿಧಿಗಳನ್ನು ಪ್ರಸ್ತಾಪಿಸಿರುವ ನ್ಯಾಯಾಲಯ ನೇಮಕಾತಿ ವಿಚಾರಗಳಲ್ಲಿ ಸರ್ಕಾರ ಪುರುಷ ಮತ್ತು ಮಹಿಳೆಯರ ನಡುವೆ ತಾರತಮ್ಯ ಮಾಡುವಂತಿಲ್ಲ. ಕೇವಲ ಲಿಂಗವನ್ನಾಧರಿಸಿ ನಾಗರಿಕರನ್ನು ಸರ್ಕಾರದ ಅಡಿಯಲ್ಲಿ ನೌಕರಿ ಅಥವಾ ಹುದ್ದೆಗೆ ಅನರ್ಹಗೊಳಿಸುವಂತಿಲ್ಲ ಎಂದು ಹೇಳಿದೆ.

“ಲಿಂಗ ತಾರತಮ್ಯವನ್ನಷ್ಟೇ ಆಧರಿಸಿ ಪುರುಷರಿಗೆ ಅನುಕಂಪ ಆಧಾರಿತ ಕೆಳ ವಿಭಾಗದ ಗುಮಾಸ್ತ ಹುದ್ದೆಗಳನ್ನು ನಿರಾಕರಿಸಲಾಗಿದೆ. ರಾಜಸ್ಥಾನ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಗುಮಾಸ್ತ ಸಿಬ್ಬಂದಿ ನಿಯಮಾವಳಿಗಳನ್ನು ಈ ನೇಮಕಾತಿ ಉಲ್ಲಂಘಿಸಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕಾನೂನಿನೆದುರು ಯಾವುದೇ ವ್ಯಕ್ತಿಗೆ ಸಮಾನತೆ ನಿರಾಕರಿಸುವುದನ್ನು ಅಥವಾ ಕಾನೂನುಗಳ ಸಮಾನ ರಕ್ಷಣೆ ಒದಗಿಸುವುದಕ್ಕೆ ನಕಾರ ವ್ಯಕ್ತಪಡಿಸುವುದನ್ನು ಸಂವಿಧಾನದ 14 ನೇ ವಿಧಿ ನಿಷೇಧಿಸುತ್ತದೆ. ಜೊತೆಗೆ 15 (1)ನೇ ವಿಧಿಯು ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದಲ್ಲಿ ತಾರತಮ್ಯ ಉಂಟು ಮಾಡುವುದನ್ನು ನಿರ್ಬಂಧಿಸುತ್ತದೆ ಎಂದು ನ್ಯಾ. ಅನೂಪ್ ಕುಮಾರ್ ಧಂಡ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

ತಮಗೆ ಅರ್ಹತೆ ಇದ್ದರೂ ನೇಮಕಾತಿ ದೊರೆಯದ ಬಗ್ಗೆ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ನೀಡಲಾಗಿದೆ. ತಮಗೆ ಗುಮಾಸ್ತ ಹುದ್ದೆ ನೀಡುವ ಬದಲು ಸಹಾಯಕ (ಗುಂಪು I) ಹುದ್ದೆ ನೀಡಲಾಗಿತ್ತು ಎಂದು ಅರ್ಜಿದಾರರು ಆರೋಪಿಸಿದ್ದರು.

ಆರೋಪ ಅಲ್ಲಗಳೆದಿದ್ದ ಆರ್ ಎಸ್ ಇಬಿ ಬಹಳಷ್ಟು ಸಂಖ್ಯೆಯ ಪುರುಷರು ಅನುಕಂಪದ ಆಧಾರದಲ್ಲಿ ಕೆಳ ವಿಭಾಗದ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿದ್ದರಿಂದ ಅವರಿಗೆ ಸಹಾಯಕ ಹುದ್ದೆ ನೀಡಿ ಕಡಿಮೆ ಸಂಖ್ಯೆಯ ಅರ್ಜಿ ಸಲ್ಲಿಸಿದ್ದ ಮಹಿಳೆಯರಿಗೆ ಗುಮಾಸ್ತ ಹುದ್ದೆ ನೀಡಲಾಗಿತ್ತು ಎಂದು ಸಮರ್ಥಿಸಿಕೊಂಡಿತ್ತು.

ಆದರೆ ಇಂತಹ ಆದೇಶ ಸಾಂವಿಧಾನಿಕ ನಿಯಮಾವಳಿಗಳನ್ನು ಧಿಕ್ಕರಿಸಿದ್ದು ರಾಜಸ್ಥಾನ ರಾಜ್ಯ ವಿದ್ಯುತ್ ಮಂಡಳಿಯ ಗುಮಾಸ್ತ ಸಿಬ್ಬಂದಿ ನಿಯಮಾವಳಿ- 1962ನ್ನು ಕೂಡ ಉಲ್ಲಂಘಿಸಿದೆ ಎಂದು ತಿಳಿಸಿದ ಪೀಠ   ಆರ್ ಎಸ್ ಇಬಿ ಆದೇಶವನ್ನು ರದ್ದುಗೊಳಿಸಿತು.