ಮನೆ ಕಾನೂನು ಮತದಾರರಿಗೆ ಹಣ ಹಂಚಿಕೆ: ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧದ ಸಮನ್ಸ್ ಗೆ ಹೈಕೋರ್ಟ್ ತಡೆ

ಮತದಾರರಿಗೆ ಹಣ ಹಂಚಿಕೆ: ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧದ ಸಮನ್ಸ್ ಗೆ ಹೈಕೋರ್ಟ್ ತಡೆ

0

ಐದು ವರ್ಷಗಳ ಹಿಂದೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ, ಹಾಲಿ ಚಾಮರಾಜನಗರ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರು ಮತದಾರರೊಬ್ಬರಿಗೆ ನೂರು ರೂಪಾಯಿಯನ್ನು ಬಹಿರಂಗವಾಗಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.

ಸಮನ್ಸ್ ರದ್ದು ಕೋರಿ ಶ್ರೀನಿವಾಸ್ ಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಶ್ರೀನಿವಾಸ್ ಪ್ರಸಾದ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ದಿವಾಕರ್ ಅವರು ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 171ಎಚ್ ಉಲ್ಲಂಘನೆ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜಕೀಯ ವೈಷಮ್ಯದಿಂದ ಪ್ರಕರಣ ದಾಖಲಿಸಲಾಗಿದ್ದು ಅದನ್ನು ರದ್ದುಗೊಳಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠವು ವಿಚಾರಣೆಗೆ ತಡೆ ನೀಡಿತು.

ಪ್ರಕರಣದ ಹಿನ್ನೆಲೆ: ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸ್ ಪ್ರಸಾದ್ 2017ರ ಮಾರ್ಚ್‌ 23ರಂದು ದೇವರಸನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ವೃದ್ಧೆಯೊಬ್ಬರಿಗೆ ಬಹಿರಂಗವಾಗಿ 100 ರೂಪಾಯಿ ನೋಟು ನೀಡಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸೆಕ್ಟರ್ ಅಧಿಕಾರಿ ಜಯಶಂಕರ್ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಸ್ಥಳೀಯ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.