ಮನೆ ರಾಜ್ಯ KMF ಮಾದರಿಯಲ್ಲಿ ಕುರಿ ಹಾಗೂ ಮೇಕೆ ಮಾಂಸ ವಿತರಣೆ

KMF ಮಾದರಿಯಲ್ಲಿ ಕುರಿ ಹಾಗೂ ಮೇಕೆ ಮಾಂಸ ವಿತರಣೆ

0

ಬೆಂಗಳೂರು: ತುಮಕೂರು ಜಿಲ್ಲೆಯಶಿರಾದಲ್ಲಿ ಅತ್ಯಾಧುನಿಕ ಕುರಿ ಮೇಕೆಗಳ ವಧಾಗಾರ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು ಮುಂದಿನ ವರ್ಷದ ಜನವರಿಯಲ್ಲಿ ಲೋಕಾರ್ಪಣೆ ಮಾಡುವುದಾಗಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ಪ್ರಕಟಿಸಿದ್ದಾರೆ .

ಚೀಲನಹಳ್ಳಿ ವಧಾಗಾರ ನಿರ್ಮಾಣದ ಕಾಮಗಾರಿ ಪ್ರಗತಿಗೆ ಸಂಬಂಧಿಸಿದಂತೆ ಟಿ.ಬಿ ಜಯಚಂದ್ರ ಅವರು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು .

ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿಗಳಾದ  ಸಲ್ಮಾ ಫಾತಿಮಾ ಹಾಗೂ ಪಶು ಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ. ಮುರಳಿಧರ್ ಡಾ ಜೆ ಪಂಪಾಪತಿ ಸೇರಿದಂತೆ  ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಖಾಸಗಿ ಸಹಭಾಗಿತ್ವದ

ಪ್ರಥಾ ಮೀಟ್ ವರ್ಕ್ಸ್ ಪ್ರೈ ಲಿ. ಸಿಇಓ ಸುದರ್ಶನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ ಎನ್ ಅಭಿಷೇಕ್ ಅವರು ಸಹ ಭಾಗವಹಿಸಿದ್ದರು.

ಶಿರಾ ತಾಲೂಕಿನ ಚೀಲನಹಳ್ಳಿಯಲ್ಲಿ ಅತ್ಯಾಧುನಿಕ ಕುರಿ ಮೇಕೆಗಳ  ವಧಾಗಾರ ಕೇಂದ್ರವನ್ನು ಸಾರ್ವಜನಿಕ  ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಲಾಗಿದ್ದು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸುವ ಕಾರ್ಯ ಮುಗಿದಿದೆ. ಮುಂದಿನ ವರ್ಷದ ಜನವರಿಯಲ್ಲಿ ರೈತರಿಂದ ಕುರಿ ಮೇಕೆಗಳನ್ನು ಖರೀದಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಂಸ ಸಂಸ್ಕರಣೆ ಮಾಡಿ ಗ್ರಾಹಕರಿಗೆ ಒದಗಿಸಲಾಗುವುದು ಎಂದು ಜಯಚಂದ್ರ ಅವರು ತಿಳಿಸಿದರು.

ರೈತರು ಬೆಳೆಸಿರುವ ಕುರಿ ಹಾಗೂ ಮೇಕೆಗಳಿಗೆ ಸ್ಪರ್ಧಾತ್ಮಕ ಬೆಲೆ ನೀಡುವುದು ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶುದ್ಧ ಮಾಂಸವನ್ನು ಸರಬರಾಜು ಮಾಡುವುದು ತಮ್ಮ ಈ ಯೋಜನೆಯ ಉದ್ದೇಶವಾಗಿದೆ. ರೈತರ ಮನೆ ಬಾಗಿಲಿಗೆ ತೆರಳಿ ಕುರಿ ಮೇಕೆಗಳನ್ನು ಖರೀದಿ ಮಾಡಲು ಸಹ ಯೋಜನೆ ರೂಪಿಸುವುದಾಗಿ ತಿಳಿಸಿದರು

 ಕೆಎಂಎಫ್ ಮಾದರಿಯಲ್ಲಿ ಕುರಿ ಹಾಗೂ ಮೇಕೆ ಮಾಂಸವನ್ನು ಬ್ರಾಂಡ್ ಮಾಡಲಾಗುವುದು.  ಕೆಎಂಎಫ್  ಬೂತ್ ನಲ್ಲಿ ಹಾಲಿನ ಎಲ್ಲಾ ಉತ್ಪನ್ನಗಳು ಗ್ರಾಹಕರಿಗೆ ದೊರೆಯುತ್ತಿರುವ ಮಾದರಿಯಲ್ಲಿ ಶುದ್ದವಾದ ಕುರಿ ಮತ್ತು ಮೇಕೆ ಮಾಂಸ ಹಾಗೂ ಮಾಂಸದ ಉತ್ಪನ್ನಗಳನ್ನು ಗ್ರಾಹಕರಿಗೆ ಸರಬರಾಜು ಮಾಡುವುದಾಗಿ ಜಯಚಂದ್ರ ಅವರು ತಿಳಿಸಿದರು.

KMF ಮಾದರಿಯಲ್ಲಿ ಮಾಂಸ   ಮಾರುಕಟ್ಟೆ ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ಅಗತ್ಯ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ‌. ಹೈನುಗಾರಿಕೆಯಲ್ಲಿ ರೈತರಿಗೆ ಯಾವ ರೀತಿ ಆದಾಯ ಬರುತ್ತಿದೆಯೋ ಅದೇ ಮಾದರಿಯಲ್ಲಿ ಕುರಿ ಹಾಗೂ ಮೇಕೆ ಸಾಕಾಣಿಕೆಯಲ್ಲಿ ಆದಾಯ ಬರುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ.

ಈ ಮೂಲಕ  ಗ್ರಾಮೀಣ ಜನತೆಯ ಆರ್ಥಿಕ ಮಟ್ಟವನ್ನ ಸುಧಾರಣೆ ಮಾಡಲಾಗುವುದು‌. ಅಷ್ಟೇ ಅಲ್ಲ  ಸ್ಥಳೀಯ ಯುವಕ ಯುವತಿಯರು ಹಾಗೂ ಮಹಿಳೆಯರಿಗೆ ಉದ್ಯೋಗ  ನೀಡುವುದು ತಮ್ಮ ಈ ಯೋಜನೆಯ ಉದ್ದೇಶವಾಗಿದೆ ಎಂದಿದ್ದಾರೆ.

ಕುರಿ ಹಾಗೂ ಮೇಕೆ ಚರ್ಮ ಸಂಸ್ಕರಣೆ ಹಾಗೂ ಅದರ ಉತ್ಪನ್ನಗಳನ್ನ ತಯಾರಿಸಲು ತಮಿಳುನಾಡಿನ ಆಂಬೂರು ಹಾಗೂ ಕೊಲ್ಕತ್ತಾ ಗೆ ಅಧಿಕಾರಿಗಳ ಕಳುಹಿಸಿ ಅಧ್ಯಯನ ಮಾಡಲು ತಿಳಿಸಿರುವುದಾಗಿ ಹೇಳಿದರು.

ಪರಿಸರಕ್ಕೆ ಹಾನಿಯಾಗದಂತೆ ಚರ್ಮ ಸಂಸ್ಕರಣೆ ಮಾಡಬೇಕು ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಚರ್ಮದ ಉತ್ಪನ್ನಗಳು ಗ್ರಾಹಕರಿಗೆ ಸಿಗುವಂತಾಗಬೇಕು ಎಂದಿದ್ದಾರೆ.

ಒಟ್ಟಾರೆ ರೈತರ ಕುರಿ ಮೇಕೆಗಳಿಗೆ ಉತ್ತಮ ಬೆಲೆ ಸಿಗಬೇಕು ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಶುದ್ಧವಾದ ಹಾಗೂ ಆರೋಗ್ಯಕರವಾದ ಮಾಂಸವನ್ನು ಸರಬರಾಜು ಮಾಡಬೇಕು ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಬೇಕು ಎಂಬುದು ತಮ್ಮ ಈ ಮಹತ್ವಾಕಾಂಕ್ಷೆ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಟಿ.ಬಿ ಜಯಚಂದ್ರ ಅವರು ಹೇಳಿದ್ದಾರೆ.