ಚಾಮರಾಜನಗರ(Chamarajanagara): ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ವಾಸಿಸುತ್ತಿದ್ದ ಸ್ಥಳಕ್ಕೆ ಸರಿಯಾದ ದಾಖಲೆಗಳಿಲ್ಲದೆ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೇ ಸಂಕಷ್ಟಕ್ಕೀಡಾಗಿದ್ದ 88 ಪೌರ ಕಾರ್ಮಿಕರ ಕುಟುಂಬಗಳಿಗೆ ಇಂದು ಹಕ್ಕುಪತ್ರ ವಿತರಿಸಲಾಗುತ್ತಿದೆ.
ಇಂದು ಮಧ್ಯಾಹ್ನ 12 ಗಂಟೆ ಸರ್ಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಕ್ಕುಪತ್ರ ವಿತರಿಸಲಿದ್ದಾರೆ.
ನಗರಸಭೆಯ 9ನೇ ವಾರ್ಡ್‌ನ ಪೌರಕಾರ್ಮಿಕರ ಕಾಲೊನಿಯಲ್ಲಿ ಕಿರಿದಾದ, ಇಕ್ಕಟ್ಟಾದ ಮನೆಗಳಲ್ಲಿ ಪೌರಕಾರ್ಮಿಕರ 88 ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳವಾಸಿಸುವ ಸ್ಥಳದ ಬಗ್ಗೆ ಇವರ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ, ಲಭ್ಯವಿರುವ ಜಾಗದಲ್ಲೇ ಹೊಸ ಮನೆ ಕಟ್ಟಲು ಇವರಿಗೆ ಸಾಧ್ಯವಾಗಿರಲಿಲ್ಲ. ದಾಖಲೆಗಳು ಇಲ್ಲದಿರುವುದರಿಂದ ಬ್ಯಾಂಕ್ ಸಾಲ ಸೇರಿದಂತೆ ಯಾವ ಸೌಲಭ್ಯಗಳೂ ಇವರಿಗೆ ಸಿಕ್ಕಿರಲಿಲ್ಲ.
ಇಲ್ಲಿನ ವಾರ್ಡ್ ಸದಸ್ಯ ಎಂ.ಮಹೇಶ್ ಅವರ ಸತತ ಪ್ರಯತ್ನದಿಂದ ಈಗ ಪೌರಕಾರ್ಮಿಕರಿಗೆ ಹಕ್ಕುಪತ್ರ ಸಿಗುತ್ತಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಮನೆ ಮನೆ ಸಮೀಕ್ಷೆ ಮಾಡಿ 88 ಕುಟುಂಬಗಳ ಹಕ್ಕುಪತ್ರ ಸಿದ್ಧಪಡಿಸಿದೆ.