ಚಾಮರಾಜನಗರ(Chamarajanagara): ಚಾಮರಾಜನಗರ ಹಾಗೂ ರಾಮನಗರದ ನಡುವೆ ಇರುವ ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ, ಜಿಲ್ಲೆಯ ಗಡಿ, ಸಂಗಮ, ಪಾಲಾರ್, ಹೊಗನೇಕಲ್ ಜಲಪಾತದ ಸ್ಥಳಗಳನ್ನು ಭೂಪಟದಲ್ಲಿ ನೋಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮೇಕೆದಾಟು ಅಣೆಕಟ್ಟು ಯೋಜನೆ ಸಂಬಂಧ ಜಿಲ್ಲಾಧಿಕಾರಿ ಭೇಟಿ ನೀಡಿರಲಿಲ್ಲ. ಹನೂರು ತಾಲೂಕಿನ ಗಾಣಿಗಮಂಗಲಕ್ಕೆ ಭೇಟಿ ಕೊಟ್ಟಿದ್ದ ಜಿಲ್ಲಾಧಿಕಾರಿಗಳು ಗಡಿಭಾಗವನ್ನು ನೋಡಲು ಮೇಕೆದಾಟುವಿಗೆ ಬಂದಿದ್ದರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಬೆಂಗಳೂರು ನಗರಕ್ಕಿಂತ ಸುಮಾರು 90 ಕಿ. ಮೀ. ದೂರದಲ್ಲಿರುವ ರಾಮನಗರದ ಜಿಲ್ಲೆಯ ಹನೂರು ಅರಣ್ಯ ವಲಯದ ಗುಡ್ಡೆಯ ನಡುವೆ ಒಂಟಿಗುಂಡು ಸ್ಥಳದಲ್ಲಿ ಹರಿಯುವ ಕಾವೇರಿ ನದಿ ಪ್ರದೇಶಕ್ಕೆ ಮೇಕೆದಾಟು ಎಂಬ ಹೆಸರು ಇದೆ.
ಕಾವೇರಿ ನದಿಯು ಅತ್ಯಂತ ರಭಸದಿಂದ ಹರಿದು ಬಂಡೆಗಳನ್ನು ಕೊರೆದು ವಿಚಿತ್ರ ಆಕೃತಿಗಳನ್ನು ಮೂಡಿಸಿದೆ. ಈ ಸ್ಥಳದಲ್ಲಿ ಆಹಾರ ತಿನ್ನಲು ಬರುವ ಮೇಕೆಗಳು ದಾಟುವ ಕಾರಣಕ್ಕಾಗಿ ಈ ಪ್ರದೇಶ ಹೆಸರು ಮೇಕೆದಾಟು ಎಂದು ಕರೆಯಲಾಗುತ್ತಿದೆ.
ಜನರ ಸಮಸ್ಯೆ ಪರಿಹರಿಸಲು ಸೂಚನೆ:
ಮೇಕೆದಾಟುವಿಗೂ ಮುನ್ನ ಜಿಲ್ಲಾಧಿಕಾರಿಗಳು ಗಾಣಿಗ ಮಂಗಲದಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಸೂಚಿಸಿದರು.
ಸರ್ಕಾರದ ವತಿಯಿಂದ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ 1 ಕೋಟಿ ರೂ. ಅನುದಾನ ದೊರಕಿದ್ದು, ಕಾಮಗಾರಿಯ ಜವಾಬ್ದಾರಿಯನ್ನು ಕೆಆರ್ ಐಡಿಎಲ್ ಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.