ಬೆಂಗಳೂರು(Bengaluru): ಜಿಲ್ಲಾಧಿಕಾರಿಗಳು ಆಡಳಿತದ ಬಹುಮುಖ್ಯ ಭಾಗ. ಜವಾಬ್ದಾರಿ ಮತ್ತು ಆಡಳಿತ ನಿರ್ವಹಣೆಯ ಹೊಣೆಯನ್ನೂ ಅರಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಹುದ್ದೆಯಲ್ಲಿರುವ ಹೆಚ್ಚಿನ ಅಧಿಕಾರಿಗಳು ಅಧಿಕಾರದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಈ ಧೋರಣೆ ಸರಿಯಲ್ಲ. ನೀವು ಹೇಗೆ ನಿರ್ಣಯಗಳನ್ನು ಕೈಗೊಳ್ಳುತ್ತೀರಿ ಮತ್ತು ಹೆಜ್ಜೆ ಗುರುತುಗಳನ್ನು ಮೂಡಿಸುತ್ತೀರಿ ಎಂಬುದು ಪ್ರಮುಖ. ಕೆಲಸ ಮಾಡದೇ ಇರುವುದಕ್ಕೆ 101 ಕಾರಣಗಳು ಇರಬಹುದು. ಒಂದು ಕಾರಣವಿದ್ದರೂ ಕೆಲಸ ಮಾಡಬಹುದು ಎಂದರು.
ತ್ವರಿತವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ನಿರ್ದೇಶನ ಪಡೆಯಬೇಕು.ಬಜೆಟ್ ಅನುಷ್ಠಾನದ ಗುರಿ ಸಾಧಿಸಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಚಿವರಾದ ಆರ್. ಅಶೋಕ, ಜೆ.ಸಿ. ಮಾಧುಸ್ವಾಮಿ, ವಿ.ಸುನಿಲ್ ಕುಮಾರ್, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಬಿ. ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸಭೆಯಲ್ಲಿದ್ದರು.