ಬೆಂಗಳೂರು : ಪತಿ-ಪತ್ನಿ ಒಂದೇ ಮನೆಯಲ್ಲಿ ವಾಸವಿರುವ ಕಾರಣಕ್ಕೆ ವಿವಾಹ ವಿಚ್ಛೇದನ ನಿರಾಕರಿಸುವಂತಿಲ್ಲಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿ-ಪತ್ನಿ ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಒಪ್ಪಿದ್ದರೆ ಆಂತಹ ವೇಳೆ ಅವರು ಒಂದೇ ಮನೆಯಲ್ಲಿ ನೆಲೆಸಿದ್ದಾರೆಂದು ಅವರ ವಿಚ್ಛೇದನಕ್ಕೆ ಅನುಮತಿ ನೀಡುವುದನ್ನು ನಿರಾಕರಿಸುವಂತಿಲ್ಲಎಂದು ನ್ಯಾಯಾಲಯ ಆದೇಶ ನೀಡಿದೆ. ಪರಸ್ಪರ ಒಪ್ಪಿಗೆಯ ವಿಚ್ಛೇದನ ನೀಡುವಂತೆ ಕೋರಿದ್ದ ಅರ್ಜಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಗೂ ವಿಚ್ಛೇದನ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಕೌಟುಂಬಿಕ ನ್ಯಾಯಾಲಯ 2022ರ ಅ.15 ರಂದು ಹೊರಡಿಸಿದ್ದ ಆದೇಶ ರದ್ದುಗೊಳಿಸಿರುವ ನ್ಯಾಯಪೀಠ, ಹೊಸದಾಗಿ ವಿಚಾರಣೆ ನಡೆಸಿ ರಾಜಿ ಅರ್ಜಿಯ ನಿಯಮಗಳಿಗೆ ಅನುಗುಣವಾಗಿ ಮಧ್ಯಸ್ಥಿಕೆದಾರರ ಸಮಕ್ಷಮದ ಲ್ಲಿಆದಷ್ಟು ಶೀಘ್ರ ಹೊಸದಾಗಿ ಆದೇಶ ನೀಡುವಂತೆ ಸೂಚನೆ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ” ವೈ ಮನಸ್ಯ ಹೊಂದಿದ ದಂಪತಿ ಸಾಮಾನ್ಯವಾಗಿ ಕಿತ್ತಾಡಿಕೊಳ್ಳುತ್ತಾರೆ. ವೈಮನಸ್ಯ ಇದ್ದರೂ ಒಂದೇ ಮನೆಯಲ್ಲಿರುವುದು ಅವರ ಸುಸಂಸ್ಕೃತಿ ತೋರುತ್ತದೆ. ಅದರೆ ಅವರು ಒಂದೇ ಮನೆಯಲ್ಲಿ ವಾಸವಿರುವ ಕಾರಣಕ್ಕೆ ವಿಚ್ಛೇದನ ನಿರಾಕರಿಸುವಂತಿಲ್ಲ. ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ತಪ್ಪೆಸಗಿದೆ,” ಎಂದು ಹೇಳಿದೆ.
ಪತಿ-ಪತ್ನಿ ಪರಸ್ಪರ ವಿಚ್ಛೇದನಕ್ಕೆ ಒಪ್ಪಿದ್ದರೂ ಅದಕ್ಕೆ ಅನುಮತಿ ನೀಡದೆ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸುವ ಮೂಲಕ ಮೇಲ್ನೋಟಕ್ಕೆ ಪ್ರಮಾದ ಎಸಗಿದೆ. ಹಾಗಾಗಿ, ಆ ಕುರಿತ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಪತಿ-ಪತ್ನಿ ಇಬ್ಬರೂ ಪರಸ್ಪರ ಸಮ್ಮಿತಿಯ ಮೇರೆಗೆ ವಿವಾಹ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಪ್ರಕರಣದ ಮಧ್ಯಸ್ಥಿಕೆಗೆ ವಹಿಸಿದ್ದಾಗಲೂ ಅವರು ಪರಸ್ಪರ ಸ್ವಂತ ಇಚ್ಛೆಯಿಂದ ದೂರವಾಗುತ್ತಿರುವುದಾಗಿ ಹೇಳಿ ಆ ಕುರಿತಂತೆ 2023ರ ಜ.2ರಂದು ಒಪ್ಪಿ ಮಧ್ಯಸ್ಥಿಕೆದಾರರ ಸಮಕ್ಷಮದಲ್ಲಿ ರಾಜಿ ಸಂಧಾನ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ನ್ಯಾಯಾಲಯ, ದಂಪತಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆಂಬ ಕಾರಣಕ್ಕೆ ವಿಚ್ಛೇದನ ನೀಡಲು ನಿರಾಕರಿಸಿತ್ತು. ಹಾಗಾಗಿ, ಅವರು ಹೈಕೋರ್ಟ್ ನ ಮೆಟ್ಟಿಲೇರಿದ್ದರು.