ಮನೆ ಕಾನೂನು ಪ್ರತ್ಯೇಕವಿದ್ದ ಮಾತ್ರಕ್ಕೆ ವಿಚ್ಛೇದನ ಅರ್ಜಿಗೆ ಮಾನ್ಯತೆ ಸಲ್ಲದು: ಹೈಕೋರ್ಟ್

ಪ್ರತ್ಯೇಕವಿದ್ದ ಮಾತ್ರಕ್ಕೆ ವಿಚ್ಛೇದನ ಅರ್ಜಿಗೆ ಮಾನ್ಯತೆ ಸಲ್ಲದು: ಹೈಕೋರ್ಟ್

0

ಬೆಂಗಳೂರು: ದಂಪತಿ ನಡುವೆ ಜಗಳವಾಗಿ ಅವರು ಪ್ರತ್ಯೇಕವಾಗಿ ನೆಲೆಸಿದ್ದಾರೆಂದ ಮಾತ್ರಕ್ಕೆ ಅವರ ವಿವಾಹ ವಿಚ್ಛೇದನದ ಅರ್ಜಿಯನ್ನು ಮಾನ್ಯ ಮಾಡುವುದು ಸಲ್ಲದು ಎಂದು ಹೈಕೋರ್ಟ್ ಹೇಳಿದೆ.
ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿದ್ದ ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ಕುರಿತು ಆದೇಶ ನೀಡಿದೆ.
ಅಲ್ಲದೇ ಹಿಂದೂ ವಿವಾಹ ಕಾಯಿದೆ ೧೯೫೫ರ ಕಲಂ ೧೩(೧)(ಐಎ) ಮತ್ತು (ಐಬಿ) ಅನ್ವಯ ಕೋರಲಾಗಿದ್ದ ವಿವಾಹ ವಿಚ್ಛೇದನದ ಡಿಕ್ರಿ ರದ್ದುಗೊಳಿಸಿದೆ.
ಅರ್ಜಿದಾರರ ದಂಪತಿಯ ನಡುವೆ ಎಲ್ಲವೂ ಸರಿಯಲ್ಲ. ೯ ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಾಗಾಗಿ ಇದು ವಿವಾಹ ವಿಚ್ಛೇದನಕ್ಕೆ ಅರ್ಹವಾಗಿದೆಯೆಂದು ಕೌಟುಂಬಿಕ ನ್ಯಾಯಾಲಯ ವಿಚ್ಛೇದನದ ಡಿಕ್ರಿ ನೀಡಿರುವುದು ಸರಿಯಲ. ಪತ್ನಿ ‌ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು ಎಂದ ಮಾತ್ರಕ್ಕೆ ಅದನ್ನು ಕ್ರೌರ್ಯ ಎಂದು ಒಪ್ಪಲಾಗದು ಎಂದು ನ್ಯಾಯಾಪೀಠ ಹೇಳಿದೆ.
ಪತಿಯ ವಾದವೇನು? :
ಪತ್ನಿ ಮದುವೆಯಾದ ತಕ್ಷಣ ಪ್ರತ್ಯೇಕ ಮನೆ ಮಾಡಬೇಕೆಂದು ‌ಒತ್ತಾಯಿಸಿ ಆಗಾಗ್ಗೆ ಜಗಳ ತೆಗಯುತ್ತಿದ್ದಳು. ‌ತಾಯಿ ಮತ್ತು ತಮ್ಮನನ್ನು ತೊರೆದು ಬರುವಂತೆ ಒತ್ತಾಯಿಸುತ್ತಿದ್ದಳು. ಒಪ್ಪದ ಕಾರಣಕ್ಕೆ ಮುನಿಸಿಕೊಂಡು ತವರಿಗೆ ಹೇಳದೇ ಕೇಳದೆ ಹೋಗಿದ್ದಳು. ಎಷ್ಟು ಕರೆದರು ಬರಲಿಲ್ಲ. ಆಗ ವಕೀಲರ ಮುಖಾಂತರ ನೋಟಿಸ್ ಕೊಡಿಸಿದ್ದಕ್ಕೆ ನನ್ನ ಮತ್ತು ಕುಟುಂಬದ ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಳು ಎನ್ನುವುದು ಪತಿಯ ದೂರು.
ಪತ್ನಿಯಿಂದ ವಿಚ್ಛೇದನ ಬೇಕೆಂದು ಕೋರಿದ್ದ ಪತಿಯ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು. ಈ ಮನವಿಯನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹಿಂದಿನ ಲೇಖನಏಪ್ರಿಲ್‌ 1 ರಿಂದ ಔಷಧ ಬೆಲೆ ದುಬಾರಿ
ಮುಂದಿನ ಲೇಖನಇಂದಿನಿಂದ ರಾಜ್ಯದಾದ್ಯಂತ ಎಸ್ಎಸ್ಎಲ್’ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಶುಭ ಹಾರೈಕೆ