ಬೆಳಗಾವಿ: ಕುಮಾರಸ್ವಾಮಿ ಹೇಗಿದ್ದರೂ ಎಂಪಿಯಾಗುವುದಿಲ್ಲ. ಮಿಸ್ಟರ್ ಕುಮಾರಸ್ವಾಮಿ ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ. ಚರ್ಚೆ ಮಾಡಲು ಸದನಕ್ಕೆ ಬಾ. ನೀನು ಎಂತ ಸುಳ್ಳುಗಾರ ಎಂಬುದು ಗೊತ್ತಾಗಲಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ನಾನು ಕಲ್ಲು ಲೂಟಿ ಮಾಡಿದೆನೋ, ಮೋಸ ಮಾಡಿದೆನೋ ಎಂಬ ಬಗ್ಗೆ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.
ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೆಚ್ಡಿಕೆ ಹೇಳಿದ್ದಾರೆ. ಇದನ್ನು ನಾವು ಖಂಡಿಸಬೇಕು. ನಾನು ಎಲ್ಲ ಮಹಿಳಾ ಸಂಘಟನೆಗಳಿಗೆ ಕರೆ ಕೊಡ್ತೇನೆ, ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರತಿಭಟನೆ ಮಾಡಿ. ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಬೇಕು. ಒಂದು ಪಕ್ಷದ ಅಧ್ಯಕ್ಷನಾಗಿ ನಾನು ಈ ಕರೆ ಕೊಡ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕುಮಾರಸ್ವಾಮಿಗೆ ಪಿಕ್ ಪಾಕೆಟ್ ಮಾಡಿ ರೂಢಿ ಇದೆ. ಅದಕ್ಕೆ ಗ್ಯಾರಂಟಿಗಳನ್ನು ಪಿಕ್ ಪಾಕೆಟ್ ಎಂದು ಹೇಳಿದ್ದಾರೆ. ಕುಮಾರಸ್ವಾಮಿಯ ವಿಷಾದ ನಮಗೆ ಬೇಡ. ಕೊಲೆ ಮಾಡಿ ನಂತರ ವಿಷಾದ ಎಂದು ಹೇಳಿದರೆ ಹೇಗೆ? ಹಿಟ್ ಆ್ಯಂಡ್ ರನ್ಗೆ ಕುಮಾರಸ್ವಾಮಿ ಬಹಳ ಫೇಮಸ್ ಎಂದು ಡಿಕೆ ಶಿವಕುಮಾರ್ ಟೀಕಿಸಿದರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೇನೆ ಎಂದು ಕುಮಾರಸ್ವಾಮಿ ಹೇಳಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.