ಬೆಂಗಳೂರು : ʻನಮಸ್ತೇ ಸದಾ ವತ್ಸಲೇ ಮಾತೃಭೂಮೇʼ ಅಂತ ಆರ್‌ಎಸ್‌ಎಸ್ ಗೀತೆಯನ್ನು ವಿಧಾನಸಭೆಯಲ್ಲಿ ಹಾಡುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಗಮನ ಸೆಳೆದಿದ್ದಾರೆ.
ವಿಧಾನಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ವಿಚಾರದ ಚರ್ಚೆ ನಡೆಯುತ್ತಿತ್ತು. ಈ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉತ್ತರ ನೀಡಿದರು. ಇದೇ ವೇಳೆ ವಿಪಕ್ಷ ನಾಯಕ ಆರ್. ಅಶೋಕ್, ಆರ್‌ಸಿಬಿ ಗೆಲುವಿನಲ್ಲಿ ಡಿಕೆಶಿ ಪಾಲ್ಗೊಂಡಿರುವ ಬಗ್ಗೆ ಪ್ರಸ್ತಾಪ ಮಾಡಿದರು.
ಇದಕ್ಕೆ ಎದ್ದು ನಿಂತ ಡಿಕೆಶಿ, ನಾನು ಕ್ರಿಕೆಟ್ ಅಭಿಮಾನಿ, ಕೆಎಸ್‌ಸಿಎ ಸದಸ್ಯ, ಕ್ರೀಡಾಂಗಣಕ್ಕೆ ಹೋಗಿದ್ದೆ. ಕಪ್‌ಗೂ ಮುತ್ತು ಕೊಟ್ಟಿದ್ದೆ. ಈ ವೇಳೆ ಆರ್‌ಎಸ್‌ಎಸ್ ಚಡ್ಡಿ ಹಾಕಿದ್ರಲ್ಲ ಅಂತ ಅಶೋಕ್ ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಡಿಕೆಶಿ, ʻನಮಸ್ತೇ ಸದಾ ವತ್ಸಲೇ ಮಾತೃಭೂಮೇʼ ಗೀತೆಯನ್ನು ಹಾಡಿ, ಈಗ ಅದೆಲ್ಲ ಚರ್ಚೆ ಬೇಡ ಅಂತ ಟಕ್ಕರ್ ಕೊಟ್ಟರು.
ಇದೀಗ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಟಕ್ಕರ್ ಕೊಟ್ಟಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಡಿಕೆಶಿ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಕಾಂಗ್ರೆಸ್‌ನಲ್ಲಿರುವ ಪ್ರತಿಯೊಬ್ಬ ನಾಯಕರು ಆರ್‌ಎಸ್‌ಎಸ್ ಅನ್ನು ಗೌರವಿಸುತ್ತಾರೆ.
ಆರ್‌ಎಸ್‌ಎಸ್‌ನ ಸಮಾಜಮುಖ ಕೆಲಸ ಗೊತ್ತಿದೆ. ಹೀಗಾಗಿ ಅವರು ಆರ್‌ಎಸ್‌ಎಸ್ ಗೌರವಿಸುತ್ತಾರೆ. ರಾಹುಲ್ ಗಾಂಧಿಯನ್ನು ಯಾರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಡಿಕೆಶಿ ಕೂಡ ತಮಾಷೆಯಾಗಿ ಹೇಳಿರಬಹುದು. ಗಾಂಧಿ ಕುಟುಂಬ ಬಿಟ್ಟು ದೇಶದ 140 ಕೋಟಿ ಜನರು ಆರ್‌ಎಸ್‌ಎಸ್ ಗೌರವಿಸುತ್ತಾರೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.














