ರಾಮನಗರ: ಇದೇ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ನಾಯಕರು ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಪಕ್ಷಾಂತರಗಳು ಸಹ ಜೋರಾಗಿವೆ.
ಕಳೆದ ವಾರ ಡಿಕೆ ಶಿವಕುಮಾರ್ ಆಪ್ತರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗಾಳ ಹಾಕಿದ್ದರು. ಪ್ರಭಾಕರ್ ರೆಡ್ಡಿ ಬದಲು ಡಿಕೆ ಶಿವಕುಮಾರ್ ಆಪ್ತೆ ಸುಷ್ಮಾ ರಾಜಗೋಪಾಲ್ ರೆಡ್ಡಿ ಅವರಿಗೆ ಕುಮಾರಸ್ವಾಮಿ ಟಿಕೆಟ್ ನೀಡಿದ್ದರು.
ಇದೀಗ ಡಿಕೆ ಬ್ರದರ್ಸ್ , ಕುಮಾರಸ್ವಾಮಿ ಆಪ್ತರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಾರಾಯಣಗೌಡ ಹಾಗೂ ಪ್ರಭಾಕರ್ ರೆಡ್ಡಿ ಅವರು ಜೆಡಿಎಸ್ ತೊರೆದು ಇಂದು(ಏಪ್ರಿಲ್ 27) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಾರಾಯಣಗೌಡ ಅವರು ಕಳೆದ ಬಾರಿ ಅಂದರೆ 2018ರಲ್ಲಿ ಕನಕಪುರ ಜೆಡಿಎಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಅವರನ್ನು ಡಿಕೆ ಶಿವಕುಮಾರ್ ಕಾಂಗ್ರೆಸ್ಗೆ ಸೇರಿಕೊಂಡಿದ್ದಾರೆ.
ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾಕರ್ ರೆಡ್ಡಿ ಅವರು ಸಹ ಇಂದು ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಈ ಬಾರಿ ಡಿಕೆ ಶಿವಕುಮಾರ್ ಅವರಿಗೆ ಪ್ರಬಲ ಪೈಪೋಟಿ ಕೊಡಲೇಬೇಕೆಂದು ಸಚಿವ ಆರ್ ಅಶೋಕ್ ಅವರನ್ನು ಕನಕಪುರದಲ್ಲಿ ಕಣಕ್ಕಿಳಿಸಿದೆ. ಇದರ ಮಧ್ಯೆ ಈ ಹಿಂದೆ ತಮ್ಮ ವಿರುದ್ಧ ಸ್ಪರ್ಧಿಸಿ 47,643 ಮತಗಳನ್ನು ಪಡೆದುಕೊಂಡಿದ್ದ ನಾರಾಯಣಗೌಡ ಅವರು ಕಾಂಗ್ರೆಸ್ ಸೇರಿದ್ದರಿಂದ ಡಿ.ಕೆ ಶಿವಕುಮಾರ್ ಅವರಿಗೆ ಆನೆ ಬಲಬಂದಂತಾಗಿದೆ.
ಕನಕಪುರ ಕ್ಷೇತ್ರದ ಜಾತಿವಾರು ಲೆಕ್ಕಚಾರ ಹೀಗಿದೆ
ಒಕ್ಕಲಿಗ- ಒಂದು ಲಕ್ಷದ ಹತ್ತು ಸಾವಿರ, ಎಸ್ ಸಿ-ಎಸ್ ಟಿ- 45 ಸಾವಿರ, ಮುಸ್ಲಿಂಮರು 15 ಸಾವಿರ, ಲಿಂಗಾಯತ- 10 ಸಾವಿರ, ಕುರುಬ- 6 ಸಾವಿರ, ಕ್ರಿಶ್ಚಿಯನ್- 4 ಸಾವಿರ, ಲಂಬಾಣಿ- 5 ಸಾವಿರ, ಕುಂಬಾರ 4 ಸಾವಿರ, ಬಣಜಿಗ- 3 ಸಾವಿರ, ಇತರೆ- 20 ಸಾವಿರ ಮತದಾರರು ಇದ್ದಾರೆ.