ಮನೆ ಕಾನೂನು ಡಿಎನ್ ​​ಎ ಪರೀಕ್ಷೆಯು ವ್ಯಕ್ತಿಯ ಗೌಪ್ಯತೆ, ಗೌರವಕ್ಕೆ ಧಕ್ಕೆ ತರಬಾರದು: ಸುಪ್ರೀಂಕೋರ್ಟ್

ಡಿಎನ್ ​​ಎ ಪರೀಕ್ಷೆಯು ವ್ಯಕ್ತಿಯ ಗೌಪ್ಯತೆ, ಗೌರವಕ್ಕೆ ಧಕ್ಕೆ ತರಬಾರದು: ಸುಪ್ರೀಂಕೋರ್ಟ್

0

ನವದೆಹಲಿ: ಡಿಎನ್ ​ಎ ಪರೀಕ್ಷೆಯು ಯಾವುದೇ ವ್ಯಕ್ತಿಯ ಘನತೆ ಮತ್ತು ಗೌಪ್ಯತೆಗೆ ಧಕ್ಕೆ ತರಬಾರದು. ಇದರಿಂದ ಆತನ ಸಾಮಾಜಿಕ ಗೌರವಕ್ಕೂ ಚ್ಯುತಿ ತಂದಂತಾಗುತ್ತದೆ ಎಂದು ಸುಪ್ರೀಂಕೋರ್ಟ್​ ಮಂಗಳವಾರ ಹೇಳಿದೆ.

Join Our Whatsapp Group

ತನ್ನ ತಾಯಿಯ ವಿವಾಹೇತರ ಸಂಬಂಧದಿಂದ ಜನಿಸಿದ್ದೇನೆ. ನನ್ನ ಜೈವಿಕ ತಂದೆ ಯಾರು ಎಂದು ತಿಳಿದುಕೊಳ್ಳಲು ವ್ಯಕ್ತಿಯೊಬ್ಬರ ಡಿಎನ್​​ಎ ಪರೀಕ್ಷೆ ನಡೆಸಬೇಕು ಎಂದು ಕೋರಿ 23 ವರ್ಷದ ಯುವಕನೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಒಬ್ಬ ವ್ಯಕ್ತಿ ತನ್ನ ತಂದೆಯೇ ಎಂದು ತಿಳಿದುಕೊಳ್ಳುವ ಕಾನೂನುಬದ್ಧ ಆಸಕ್ತಿಯು ಇನ್ನೊಬ್ಬರ ಗೌಪ್ಯತೆ ಮತ್ತು ಘನತೆಯ ಹಕ್ಕನ್ನು ಮೀರಬಾರದು. ಇಂತಹ ಪ್ರಕರಣದಲ್ಲಿ ಡಿಎನ್​ಎ ನಡೆಸಲು ಕೋರುವುದು ವ್ಯಕ್ತಿಯ ಹಕ್ಕಿನ ಚ್ಯುತಿಯಾಗಲಿದೆ. ಯುವಕನ ಮಾಜಿ ತಂದೆಯೇ ನಿಜವಾದ ಜೈವಿಕ ತಂದೆ ಎಂದು ತೀರ್ಪು ನೀಡಿ, ಎರಡು ದಶಕಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಕೋರ್ಟ್​ ಇತಿಶ್ರೀ ಹಾಡಿತು.

ಏನಿದು ಪ್ರಕರಣ: ಕೇರಳದ ಯುವಕನೊಬ್ಬ, ತನ್ನ ತಾಯಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ತನ್ನ ತಂದೆಯೇ ಎಂದು ತಿಳಿದುಕೊಳ್ಳಲು ಡಿಎನ್​ಎ ಪರೀಕ್ಷೆ ನಡೆಸಬೇಕು ಎಂದು ಕೋರಿದ್ದ. ಆದರೆ, ಹೈಕೋರ್ಟ್​ ಇದನ್ನು ನಿರಾಕರಿಸಿತ್ತು. ಇದರ ವಿರುದ್ಧ ಯುವಕ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ. ಇತ್ತ ಪ್ರತಿವಾದಿಯಾದ ವ್ಯಕ್ತಿಯೂ ತಾನು ಯುವಕನ ತಂದೆ ಅಲ್ಲ ಎಂದು ನಿರಾಕರಿಸುತ್ತಲೇ ಬಂದಿದ್ದರು. ಆರೋಪದಿಂದ ನನ್ನ ಸಾಮಾಜಿಕ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಿಚಾರಣೆಯಲ್ಲಿ, ಯುವಕನು ತಾನು ದೈಹಿಕವಾಗಿ ಬಹು ಸಮಸ್ಯೆಗಳನ್ನು ಹೊಂದಿದ್ದೇನೆ. ಹೀಗಾಗಿ, ತಾಯಿ ಜೊತೆ ವಿವಾಹೇತರ ಸಂಬಂಧ ಹೊಂದಿದ ವ್ಯಕ್ತಿಯನ್ನು ತಂದೆ ಎಂದು ಘೋಷಿಸಿ, ಆತನಿಂದ ಜೀವನಾಂಶ ಕೊಡಿಸಬೇಕು ಎಂದ ಕೋರಿದರು. ಪ್ರತಿವಾದಿ ವಕೀಲರು, ತಮ್ಮ ಕಕ್ಷಿದಾರರಿಗೂ ಯುವಕನಿಗೂ ಸಂಬಂಧವಿಲ್ಲ. ಆತನ ತಾಯಿ ಮತ್ತು ಮಾಜಿ ತಂದೆಯ ಫಲ ಈತ. ಸದ್ಯ ಪೋಷಕರು ದೂರವಾದರೂ, ಈತ ಜನಿಸುವಾಗ ಒಟ್ಟಿಗೆ ಇದ್ದರು. ಹೀಗಾಗಿ, ಈ ಆರೋಪ ನಿರಾಧಾರ ಎಂದು ವಾದಿಸಿದ್ದರು.

ಇದನ್ನೆಲ್ಲಾ ಆಲಿಸಿದ ಸುಪ್ರೀಂಕೋರ್ಟ್​, ಯುವಕನ ಕಾನೂನಾತ್ಮಕ ಆಸಕ್ತಿಯಿಂದ ವ್ಯಕ್ತಿಯೊಬ್ಬರ ಡಿಎನ್​ಎ ಪರೀಕ್ಷೆಗೆ ಸೂಚಿಸಲು ಸಾಧ್ಯವಿಲ್ಲ. ಇದು ವ್ಯಕ್ತಿ ಗೌರವಕ್ಕೆ ಧಕ್ಕೆ ತರಲಿದೆ ಎಂದು ಪ್ರಕರಣವನ್ನು ಮುಕ್ತಾಯ ಮಾಡಿತು.