ಮನೆ ರಾಜ್ಯ ಪಿಎಸ್‌ ಐ ಮರುಪರೀಕ್ಷೆ: ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ಅನ್ಯಾಯವಾಗಬಾರದು; ಹೆಚ್‌.ಡಿ.ಕುಮಾರಸ್ವಾಮಿ

ಪಿಎಸ್‌ ಐ ಮರುಪರೀಕ್ಷೆ: ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ಅನ್ಯಾಯವಾಗಬಾರದು; ಹೆಚ್‌.ಡಿ.ಕುಮಾರಸ್ವಾಮಿ

0

ಹುಬ್ಬಳ್ಳಿ (Hubballi)- ಪಿಎಸ್‌ ಐ ಆಯ್ಕೆ ಪರೀಕ್ಷೆ ಮತ್ತೆ ಹೊಸದಾಗಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ (Priyank kharge) ವಿರೋಧಿಸಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumarswamy) ಅವರು ಸಹ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸರ್ಕಾರದ ಈ ನಿರ್ಧಾರದಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಅವರಿಗೆ ಅನ್ಯಾಯ ಆಗಲು ಬಿಡಬಾರದು ಎಂದರು.

ಹಣದ ದುರಾಸೆಗೆ ಬಿದ್ದು ಕೆಲ ಧನ ಪಿಶಾಚಿಗಳು ತಪ್ಪು ಮಾಡಿದ್ದಾರೆ. ಸುಲಭವಾಗಿ ದುಡ್ಡು ಮಾಡುವ ದುರುದ್ದೇಶದಿಂದ ಇಡೀ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿರುವ ಅಂಥವರನ್ನು ಹಿಡಿದು ಮೊದಲು ಶಿಕ್ಷಿಸಿ. ಯಾವ ಅಭ್ಯರ್ಥಿಗಳು ಅಡ್ಡದಾರಿಯಲ್ಲಿ ಪಾಸಾಗಿದ್ದಾರೋ ಅಂಥವರನ್ನು ಪತ್ತೆ ಹಚ್ಚಿ. ಅದರ ಹೊರತಾಗಿ ಈಗಾಗಲೇ ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಲು ಬಿಡಬಾರದು. ಅನೇಕ ಬಡ ಅಭ್ಯರ್ಥಿಗಳು ಪಾಸಾಗಿದ್ದು, ಅವರಿಗೆ ತೊಂದರೆ ಆಗಬಾರದು ಎಂದು ಹೇಳಿದರು.

ತಪ್ಪು ಆಗಿರುವುದು ಸರಕಾರದಿಂದ. ಪರೀಕ್ಷೆ ನಡೆಸುವ ವಿಚಾರದಲ್ಲಿ ಸರಕಾರ ಮತ್ತು ಅಧಿಕಾರಿಗಳಿಂದ ಗುರುತರ ಲೋಪ ಆಗಿದೆ. ಹಾಗಂತ, ಇಡೀ ಪರೀಕ್ಷೆಯನ್ನೇ ರದ್ದು ಮಾಡಿ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.

ಪರೀಕ್ಷೆಯ ಅಕ್ರಮ ತನಿಖೆ ಹಂತದಲ್ಲಿರುವಾಗಲೇ ಮರು ಪರೀಕ್ಷೆ ನಡೆಸುತ್ತೇವೆ ಎಂದರೆ ಏನರ್ಥ? ಸರಕಾರದ ತಪ್ಪಿದೆ. ಈಗೇನೋ ಪರೀಕ್ಷೆಯನ್ನು ರದ್ದು ಮಾಡುತ್ತಾರೆ, ಮುಂದಿನ ಪರೀಕ್ಷೆಯನ್ನು ಸರಿಯಾಗಿ, ಪಾರದರ್ಶಕವಾಗಿ ನಡೆಸುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ? ಎಂದು ಪ್ರಶ್ನಿಸಿದ ಹೆಚ್ಡಿಕೆ ಅವರು, ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸಿ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು. ಆಗ ಮಾತ್ರ ಇಂಥ ಪರೀಕ್ಷೆಗಳ ಬಗ್ಗೆ ನಂಬಿಕೆ ಬರುತ್ತದೆ ಎಂದರು.

ಸಹಕಾರಿ ಬ್ಯಾಂಕುಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ. ಡೈರಿ, ಭೂ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ಸಹಕಾರ ಇಲಾಖೆಯಲ್ಲಿ ಹೇಗೆಲ್ಲ ನೇಮಕಾತಿಗಳು ನಡೆಯುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಲ್ಲೂ ಲಕ್ಷಾಂತರ ರೂಪಾಯಿ ಕೊಟ್ಟು ಕೆಲಸಕ್ಕೆ ಸೇರಬೇಕಾದ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.

ಹಿಂದಿನ ಲೇಖನಜಿಗ್ನೇಶ್‌ ಮೇವಾನಿಗೆ ಜಾಮೀನು ಮಂಜೂರು
ಮುಂದಿನ ಲೇಖನನಾನು ಮೆಕ್ಕಾದಲ್ಲಿದ್ದೇನೆ, ಆರೋಪ ಸತ್ಯಕ್ಕೆ ದೂರವಾದವು: ಜಮೀರ್‌ ಅಹ್ಮದ್‌