ಮಳವಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದೆ ಮೇ15ರಿಂದ ನಮ್ಮ ಸರ್ಕಾರ ಬರಲಿದ್ದು, ಜೂನ್ 1 ರಿಂದ ನೀವು ಕರೆಂಟ್ ಬಿಲ್ ಕಟ್ಟಬೇಡಿ ಎಂದು ಹೇಳಿದರು.
ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಮಳವಳ್ಳಿ ಜನತೆ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಬೆಂಬಲಿಸಬೇಕು. ಬಿಜೆಪಿಯನ್ನು ದೂರ ಇಟ್ಟು ಕುಮಾರಸ್ವಾಮಿಗೆ ದರ್ಬಾರ್ ಮಾಡು ಅಂತ ಕಳೆದ ಬಾರಿ ಅಧಿಕಾರ ಕೊಟ್ಟೆವು. ಆದರೆ, ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ ಎಂದು ಎಚ್ಡಿಕೆ ಮೇಲೆ ಗೂಬೆ ಕೂರಿಸಿದರು.
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದೆ. ಮೇ 15ರಿಂದ ಹೊಸ ಸರ್ಕಾರ ಬರುತ್ತದೆ. ಜೂನ್ 1ರಿಂದ ಕರೆಂಟ್ ಬಿಲ್ ಕಟ್ಟಬೇಡಿ. ವರ್ಷಕ್ಕೆ ಪ್ರತಿ ಕುಟುಂಬಕ್ಕೆ 24 ಸಾವಿರ ರೂಪಾಯಿ ಬರುತ್ತದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಕೊಡುತ್ತೇವೆ. ಬಡವರು ಹಸಿವಿನಿಂದ ಬಳಲಬಾರದು ಎಂದು 10 ಕೆಜಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ನಿಮ್ಮ ಬದುಕಿನಲ್ಲಿ ಏನಾದ್ರೂ ಬದಲಾವಣೆ ಅಗಿದೆಯಾ? ಮೇ. 10ರ ಮತದಾನದ ದಿನ ನಿಮ್ಮ ಭವಿಷ್ಯನ ನೀವೇ ನಿರ್ಮಾಣ ಮಾಡುವಂತಹ ದಿನ. ನಿಮಗೆ ಅಚ್ಚೆ ದಿನ ತರುತ್ತೇವೆ ಅಂತ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ದುಷ್ಟ ಆಡಳಿತ ನೀಡುತ್ತಿದೆ.ಮೂರೂವರೆ ವರ್ಷ ಒಂದು ಸರ್ಕಾರವನ್ನು ನೋಡಿದ್ದೇವೆ. ಇಷ್ಟು ವರ್ಷದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬುವುದನ್ನು ಅರಿತುಕೊಳ್ಳಿ ಎಂದರು.
ಯುವಕರಿಗೆ ಕೆಲಸ ಕೊಡುತ್ತೇವೆ ಅಂತ ಬಿಜೆಪಿ ಹೇಳಿತ್ತು. ಆದರೆ ಆಮೇಲೆ ಪಕೋಡ ಮಾರಿ ಅಂತ ಹೇಳಿದ್ರು. ಹೀಗಾಗಿ ಪದವಿ ಮಾಡಿರುವವರಿಗೆ ಪ್ರೋತ್ಸಾಹ ಧನ ನೀಡುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ. ಇವೆಲ್ಲ ಘೋಷಣೆ ಮಾಡಿಲ್ಲ ಅಂದ್ರೆ ಮತ್ತೆ ಮತ ಕೇಳುವುದಕ್ಕೆ ಬರುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಶಪಥ ಎಂದು ಹೇಳಿದರು.