ಮನೆ ದೇವಸ್ಥಾನ ಶ್ವೇತ ವರಾಹ ವಿಗ್ರಹ ತಂಜಾವೂರಿನಿಂದ ಮೈಸೂರಿಗೆ ಬಂದಿದ್ದು ಹೇಗೆ ಗೊತ್ತಾ ?

ಶ್ವೇತ ವರಾಹ ವಿಗ್ರಹ ತಂಜಾವೂರಿನಿಂದ ಮೈಸೂರಿಗೆ ಬಂದಿದ್ದು ಹೇಗೆ ಗೊತ್ತಾ ?

0

ಮೈಸೂರು ಸಂಸ್ಥಾನದಲ್ಲಿ ಚಿಕ್ಕದೇವರಾಜ ಒಡೆಯರ್​ ಅವರು ಆಳ್ವಿಕೆ ಮಾಡುತ್ತಿದ್ದ ಕಾಲ. ಮೈಸೂರು ಸುಖ ಸಮೃದ್ಧಿಯಿಂದ ಕೂಡಿದ ಕಾಲವದು.. ಅದೇ ಕಾಲಘಟ್ಟದಲ್ಲಿ ಚೋಳರ ಸಾಮ್ರಾಜ್ಯ ತಂಜಾವೂರನ್ನ ಮರಾಠ ದೊರೆಗಳು ಆಕ್ರಮಣ ಮಾಡಿಕೊಂಡಿದ್ದರು. ಶಿವಾಜಿ ಮಹಾರಾಜರ ಸೋದರ ಸಂಬಂಧಿ ವೆಂಕೋಜಿಯ ಪುತ್ರ ಶಾಹುಜಿ ತಂಜಾವೂರಿನ ದೊರೆಯಾಗಿದ್ದ.

ತಂಜಾವೂರಿನಲ್ಲಿ ಶಾಹುಜಿ ಮಹಾರಾಜರು ಆಳ್ವಿಕೆ ಮಾಡುತ್ತಿದ್ದ ಸಮಯದಲ್ಲೇ ಮೈಸೂರಿನಲ್ಲಿ ದೊರೆ ಚಿಕ್ಕದೇವರಾಜ ಒಡೆಯರು ಅಧಿಕಾರದಲ್ಲಿದ್ದರು.. ಆ ಸಮಯದಲ್ಲಿ ಮೈಸೂರು ಸಂಸ್ಥಾನ ಉತ್ತುಂಗದಲ್ಲಿತ್ತು. ಅದನ್ನು ಸಹಿಸದ ಶಾಹುಜಿ ಮಹರಾಜ್​, ಶ್ರೀಮುಷ್ಣಂ ನ ಶ್ವೇತವರಾಹ ದೇಗುಲದಲ್ಲಿ ನಿಂತು ಯಾವ ರಾಜ್ಯ ಗ್ರೇಟ್​ ಎನ್ನುವ ಬಗ್ಗೆ ಮಾತನಾಡಿದ್ದ.. ಆ ಮಾತುಗಳು ಬಾಯಿಂದ ಬಾಯಿಗೆ ಬಂದು, ಚಿಕ್ಕ ದೇವರಾಜರ ಕಿವಿಗೂ ಬೀಳುತ್ತೆ.. ಆಗಲೇ ಚಿಕ್ಕದೇವರಾಜ ಒಡೆಯರು, ಶಾಹುಜಿ ಆಡಿದ ಮಾತುಗಳನ್ನ ಸವಾಲಾಗಿ ಸ್ವೀಕರಿಸಿದ್ದು.

ತಮಿಳುನಾಡಿನ ಅತ್ಯಂತ ಪ್ರಾಚೀನ ಪಟ್ಟಣಗಳಲ್ಲೊಂದು ಶ್ರೀಮುಷ್ಣಂ. ಅಲ್ಲಿದ್ದ ಶ್ವೇತವರಾಹ ಸ್ವಾಮಿ ದೇವಾಲಯದಿಂದಲೇ ಅದು ಜಗದ್ವಿಖ್ಯಾತಿಯನ್ನ ಗಳಿಸಿತ್ತು. ಯಾಕಂದ್ರೆ, ದಕ್ಷಿಣ ಭಾರತದಲ್ಲಿ ಇರುವ ಎಲ್ಲಾ ದೇವಾಲಯಗಳ ವಿಗ್ರಹಳು ಕೂಡ ಕಪ್ಪು ಶಿಲೆಯಿಂದ ಕೂಡಿವೆ. ಅರ್ಥಾತ್​ ಸಾಲಿಗ್ರಾ,ಮ ಶಿಲೆಯಿಂದ ಮಾಡಿದಂತಾ ಪ್ರತಿಮೆಗಳಾಗಿವೆ. ದಕ್ಷಿಣ ಭಾರತದ ಹಿಂದೂಗಳ ಪ್ರಕಾರ, ಸಾಲಿಗ್ರಾಮ ಶಿಲೆಯಲ್ಲಿ ಸಾಕ್ಷಾತ್​ ಭಗವಂತ ನೆಲೆಸಿರುತ್ತಾನೆ ಎನ್ನುವುದು ನಂಬಿಕೆ. ಇದೇ ಕಾರಣಕ್ಕೆ ಸಾಲಿಗ್ರಾಮ ಶಿಲೆಯನ್ನ ಕೃಷ್ಣಶಿಲೆ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತೆ. ಹೀಗಿರುವಾಗ ಶ್ರೀಮುಷ್ಣಂನ ವರಾಹಸ್ವಾಮಿ ವಿಗ್ರಹ ಶ್ವೇತವರ್ಣದಿಂದ ಕೂಡಿತ್ತು. ದಕ್ಷಿಣ ಭಾರತದಲ್ಲಿ ಶ್ವೇತವರಹಾ ದೇಗುಲ ಅದೊಂದೇ ಆಗಿತ್ತು. ತಂಜಾವೂರಿನ ಅರಸರಿಗೆ ಅದೊಂದು ಹೆಮ್ಮೆಯ ವಿಷಯವೂ ಎನಿಸಿತ್ತು.

ಮೈಸೂರಿನ ಆ ಚಿಕ್ಕದೇವರಾಜರದ್ದು ಅದೆಂತಾ ಗರ್ವ.. ಅವರ ಆಸ್ಥಾನದಲ್ಲಿ ಅಂಥಾದ್ದೇನಿದೆ. ಅಲ್ಲಿ ಮೇಲುಕೋಟೆಯೊಂದನ್ನ ಬಿಟ್ಟು ಪ್ರಸಿದ್ಧ ವೈಷ್ಣವ ಕ್ಷೇತ್ರವಿನ್ನಾವುದೂ ಇಲ್ಲ. ನಮ್ಮ ದೇಶ ಕಣ್ಣು ಹಾಯಿಸಿದಷ್ಟು ಶ್ರೀಮಂತವಾಗಿದೆ. ಶ್ರೀರಂಗ, ಶ್ರೀಮುಷ್ಣಂ, ಕುಂಭಕೋಣ, ಕಂಚಿ, ಮನ್ನಾರಗುಡಿ ನೂರಾರು ವಿಷ್ಣುಕ್ಷೇತ್ರಳಿವೆ. ಚಿದಂಬರ, ಮಧ್ಯಾರ್ಜುನ, ಮಧುರೆ, ರಾಮೇಶ್ವರ ಸಾಲು ಸಾಲು ಶಿವ ಕ್ಷೇತ್ರಗಳಿವೆ. ಇಷ್ಟೆಲ್ಲಾ ಪುಣ್ಯ ಕ್ಷೇತ್ರಗಳು ನಮ್ಮ ನಾಡಿನಲ್ಲಿವೆ. ಇವರದೇನು ಹೆಚ್ಚು, ಆ ಸಣ್ಣ ರಾಜ್ಯದ್ದೇನು ದೊಡ್ಡಸ್ಥಿಕೆ.

ತಂಜಾವೂರಿನ ದೊರೆ ಆಡಿದ ಮಾತುಗಳು ಕೆಲವೇ ದಿನಗಳಲ್ಲಿ ಚಿಕ್ಕ ದೇವರಾಜ ಒಡೆಯರ್​ ಅವರ ಕಿವಿಗೆ ಬೀಳುತ್ತೆ. ಮೈಸೂರು ಸಂಸ್ಥಾನದಲ್ಲಿ ಮೇಲುಕೋಟೆಯ ಚೆಲುವ ನಾರಾಯಣನನ್ನ ಹೊರತುಪಡಿಸಿದರೆ ಬೇರೆ ಯಾವುದೇ ವಿಷ್ಣುವಿನ ಕ್ಷೇತ್ರಗಳಿಲ್ಲ. ಆದರೆ ತಂಜಾವೂರಿನಲ್ಲಿ ಶ್ರೀರಂಗ, ಶ್ರೀಮುಷ್ಣಂ, ಕುಂಭಕೋಣ, ಕಂಚಿ, ಮನ್ನಾರಗುಡಿ ನೂರಾರು ವಿಷ್ಣುಕ್ಷೇತ್ರಳಿವೆ. ಚಿದಂಬರ, ಮಧ್ಯಾರ್ಜುನ, ಮಧುರೆ, ರಾಮೇಶ್ವರ ರೀತಿಯ ಸಾಲು ಸಾಲು ಶಿವ ಕ್ಷೇತ್ರಗಳಿವೆ ಎಂದು ಜಂಭ ಕೊಚ್ಚಿಕೊಂಡಿದ್ದ. ಅದರ ಜೊತೆಗೆ ಶ್ರೀಮುಷ್ಣಂ ಎನ್ನುವ ಶ್ವೇತ ವರಾಹ ದೇಗುಲ ಭರತಖಂಡದಲ್ಲೇ ಇಲ್ಲ ಎಂದು ಧಿಮಾಕು ತೋರಿಸಿಕೊಂಡಿದ್ದ.

ಶಾಹುಜಿಯ ಆ ಮಾತುಗಳು ಮೈಸೂರು ಮಹಾರಾಜರಿಗೆ ಖಿನ್ನತೆ ಹಾಗೂ ಕೋಪ ಎರಡನ್ನೂ ತರಿಸುತ್ತೆ. ಹೇಗಾದರು ಮಾಡಿ ಶಾಹುಜಿಯ ಜಂಭವನ್ನ ಇಳಿಸಲೇಬೇಕು. ಮೈಸೂರು ಸಂಸ್ಥಾನದ ಬಗ್ಗೆ ಮಾತನಾಡಿದ ಆತನಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸುತ್ತಾರೆ. ಆಗ ಅವರಿಗೆ ಹೊಳೆಯುವ ಆಲೋಚನೆ ಅರಮನೆಯ ಪ್ರತಿಯೊಬ್ಬರನ್ನೂ ಚಕಿತಗೊಳಿಸಿಬಿಟ್ಟಿತ್ತು. ಯಾಕಂದ್ರೆ, ತಂಜಾವುರಿನ ದೊರೆ ಶಾಹುಜಿ ಯಾವ ಶ್ರೀಮುಷ್ಣಂನ ಶ್ವೇತವರಾಹ ದೇಗುಲದಲ್ಲಿ ನಿಂತು ಜಂಭ ಕೊಚ್ಚಿಕೊಂಡಿದ್ದನೋ, ಆ ದೇಗುಲದಲ್ಲಿರುವ ಅಪರೂಪದ ಶ್ವೇತವರಾಹ ಸ್ವಾಮಿಯ ವಿಗ್ರಹವನ್ನೇ ಅಪಹರಿಸಿಕೊಂಡು ಬರಲು ಅವರು ಆಜ್ಞೆ ಮಾಡಿದ್ದರು.

ಮೈಸೂರು ಮಹಾರಾಜರು ಒಮ್ಮೆ ನಿರ್ಧರಿಸಿದರೆ ಮುಗಿಯಿತು. ಅದನ್ನ ಸಾಧಿಸುವವರೆಗೆ ಸಮಾಧಾನ ಇರುತ್ತಿರಲಿಲ್ಲ. ತಂಜಾವೂರಿನ ಶಾಹುಜಿ ಮಹಾರಾಜರಿಗೆ ಬುದ್ಧಿ ಕಲಿಸಲೇಬೇಕು ಎನ್ನುವ ಕಾರಣಕ್ಕೆ ಚಿಕ್ಕದೇವರಾಜ ಒಡೆಯರು, ಶ್ವೇತವರಾಹ ವಿಗ್ರಹ ಅಪಹರಣಕ್ಕೆ ತಮ್ಮ ಭಟರನ್ನ ಕಳುಹಿಸಿಕೊಡ್ತಾರೆ.

ತಂಜಾವೂರಿನ ಸಾಹುಜಿ ಮಹಾರಾಜರ ಮಾತುಗಳನ್ನ ಚಿಕ್ಕದೇವರಾಜ ಒಡೆಯರು ಸವಾಲಾಗಿ ಸ್ವೀಕರಿಸಿದ್ದರು. ಮೈಸೂರು ಸಂಸ್ಥಾನದಲ್ಲಿ ಏನೂ ಇಲ್ಲ ಎನ್ನುವ ಆತನ ಜಂಭದ ಮಾತುಗಳಿಗೆ ಪಾಠ ಕಲಿಸಲೇಬೇಕು ಎನ್ನುವ ಪಣ ತೊಟ್ಟಿದ್ದರು.. ಅದರಂತೆ ಚಾಣರೂ, ಯುಕ್ತಿವಂತರೂ ಆಗಿದ್ದ ಕೆಲ ಭಟರನ್ನ ಕರೆದು ಶ್ವೇತವರಾಹ ಸ್ವಾಮಿಯ ವಿಗ್ರಹವನ್ನೇ ಅಪಹರಣ ಮಾಡಲು ಹೇಳಿ ಕಳುಹಿಸಿದ್ದವರು.

ಶ್ವೇತ ವರಾಹ ಸ್ವಾಮಿ. ದಕ್ಷಿಣ ಭಾರತದ ಏಕೈಕ ಹಾಗೂ ಅಪರೂಪದಲ್ಲಿ ಅಪರೂಪದ ವಿಗ್ರಹವದು. ಆ ವಿಗ್ರಹ ತಂಜಾವೂರಿನ ಹಿರಿಮೆಯೂ ಆಗಿತ್ತು. ಆದರೆ ಅದನ್ನ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ ಶಾಹುಜಿ ದೊರೆ, ಮೈಸೂರಿನ ಚಿಕ್ಕದೇವರಾಜ ಒಡೆಯರ್​ ಅವರನ್ನ ಕೆಣಕಿಬಿಟ್ಟಿದ್ದ. ಅದನ್ನು ಸವಾಲೆಂದು ಸ್ವೀಕರಿಸಿದ ಚಿಕ್ಕದೇವರಾಜರು, ತಮ್ಮ ಆಸ್ಥಾನದಲ್ಲಿದ್ದ ಚಾಣರೂ ಯುಕ್ತಿವಂತರೂ ಆಗಿದ್ದ ಜನ ಕೆಲವರನ್ನ ಕರೆಸಿ, ಅವರಿಗೆ ಒಂದಿಷ್ಟು ದ್ರವ್ಯವನ್ನಕೊಟ್ಟು, ರಹಸ್ಯವಾಗಿ ಆ ವಿಗ್ರಹವನ್ನ ಅಪಹರಿಸಸಿ ತರುವಂತೆ ಆಜ್ಞಾಪಿಸುತ್ತಾರೆ. ಅದರಂತೆ ರಾಜರ ಭಟರು ತಂಜಾವೂರನ್ನ ಸೇರುತ್ತಾರೆ. ಶ್ವೇತವರಾಹ ದೇಗುಲದ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಇಂಟರೆಸ್ಟಿಂಗ್​ ಏನಂದ್ರೆ, ದೇಶದಲ್ಲೇ ಅಪರೂಪದ ವಿಗ್ರಹ ಅದಾಗಿತ್ತು. ಆದ್ರೆ, ತಂಜಾವೂರಿನ ಅರಸರು ಆ ದೇಗುಲಕ್ಕೆ ಯಾವುದೇ ಭದ್ರತೆಯನ್ನೇ ಮಾಡಿರಲಿಲ್ಲ.

ಆ ಅವಕಾಶಕ್ಕಾಗಿ ಕಾದಿದ್ದ ಮೈಸೂರಿನ ಭಟರು, ದೇಗುಲದಲ್ಲಿದ್ದ ಕೆಲವರ ಪರಿಚಯ ಮಾಡಿಕೊಳ್ತಾರೆ. ಒಂದಿಷ್ಟು ಅರ್ಚಕರಿಗೆ, ಅಲ್ಲಿನ ಜನರಿಗೆ ದ್ರವ್ಯ ಅಂದ್ರೆ ಹಣವನ್ನ ಕೊಟ್ಟು ಪುಸಲಾಯಿಸುತ್ತಾರೆ. ಅತ್ಯಂತ ಉಪಾಯದಿಂದ ರಾತ್ರೋರಾತ್ರಿ ಆ ವಿಗ್ರಹವನ್ನ ಅಪಹರಿಸಿಕೊಂಡು ಬರುತ್ತಾರೆ.

ತಂಜಾವೂರಿನ ಹೆಮ್ಮೆ ಎನಿಸಿಕೊಂಡಿದ್ದ, ತಂಜಾವೂರಿನ ಪ್ರತಿಷ್ಠೆ ಎನಿಸಿಕೊಂಡಿದ್ದ ಶ್ಚೇತವರಾಹ ವಿಗ್ರಹ ರಾತ್ರಿ ಕಳೆದು ಹಗಲಾಗುವುದರಲ್ಲಿ ನಾಪತ್ತೆಯಾಗಿತ್ತು. ಸುದ್ದಿ ಕಾಳ್ಗಿಚ್ಚಿನಂತೆ ತಂಜಾವೂರಿನಾದ್ಯಂತ ಹರಡುತ್ತೆ. ದೊರೆ ಶಾಹುಜಿಯನ್ನೂ ತಲುಪುತ್ತೆ. ಶಾಹುಜಿಗೆ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ. ಅಷ್ಟೊತ್ತಿಗೆ ಮೈಸೂರು ಮಹಾರಾಜರಿಂದ ಓಲೆಯೊಂದು ಬಂದಿತ್ತು. ಅದನ್ನು ಓದಿದ ಶಾಹುಜಿ ಮಹಾರಾಜ್​ ಕ್ಷಣ ಕಾಲ ಬೆಚ್ಚಿಬಿದ್ದಿದ್ದ. ಯಾಕಂದ್ರೆ, ಮೈಸೂರು ಮಹಾರಾಜರನ್ನ ಕೆಣಕಿದರೆ ಏನಾಗುತ್ತದೆ ಎನ್ನುವ ಅರಿವು ಆತನಿಗಾಗಿತ್ತು..

ತಂಜಾವೂರಿನ ಪ್ರಿಯ ಮಹಾರಾಜರೇ.. ಮೈಸೂರು ಸಂಸ್ಥಾನದ ಮಹಾರಾಜ ಚಿಕ್ಕದೇವರಾಜರು ಮಾಡುವ ನಮಸ್ಕಾರಗಳು. ನಿಮ್ಮ ರೀತಿಯಲ್ಲಿ ನಾನು ಏಕವಚನವನ್ನು ಬಳಸುವುದಿಲ್ಲ. ನೀವು ಮೈಸೂರು ಸಂಸ್ಥಾನದಲ್ಲಿ ಅಂಥಾದ್ದೇನಿದೆ ಎಂದು ಪ್ರಶ್ನೆ ಮಾಡಿದ್ದಿರಿ. ಮೈಸೂರು ಸಂಸ್ಥಾನದಲ್ಲಿ ಮೇಲುಕೋಟೆಯೊಂದನ್ನ ಬಿಟ್ಟು ಪ್ರಸಿದ್ಧ ವೈಷ್ಣವ ಕ್ಷೇತ್ರಗಳೇ ಇಲ್ಲ ಎಂದು ಕುಹಕವಾಡಿದ್ದಿರಿ. ನಿಮ್ಮ ರಾಜ್ಯ ಶ್ರೀಮಂತವಾಗಿದೆ. ಶ್ರೀರಂಗ, ಶ್ರೀಮುಷ್ಣಂ, ಕುಂಭಕೋಣ, ಕಂಚಿ, ಮನ್ನಾರಗುಡಿ ನೂರಾರು ವಿಷ್ಣು ಕ್ಷೇತ್ರಳಿವೆ. ಚಿದಂಬರ, ಮಧ್ಯಾರ್ಜುನ, ಮಧುರೆ, ರಾಮೇಶ್ವರ ಸಾಲು ಸಾಲು ಶಿವ ಕ್ಷೇತ್ರಗಳಿವೆ. ಇಷ್ಟೆಲ್ಲಾ ಪುಣ್ಯ ಕ್ಷೇತ್ರಗಳು ನಿಮ್ಮ ನಾಡಿನಲ್ಲಿವೆ. ಆದರೆ ಆ ಕ್ಷೇತ್ರಗಳಲ್ಲಿ ದೇವರಿಗೂ ರಕ್ಷಣೆ ಇಲ್ಲವಲ್ಲ. ರಾತ್ರಿ ಕಳೆದು ಹಗಲಾಗುವುದರಲ್ಲಿ ನಿಮ್ಮ ಶ್ವೇತವರಾಹ ಸ್ವಾಮಿ ನಮ್ಮ ನಾಡಿಗೆ ಬಂದುಬಿಟ್ಟಿದ್ದಾನೆ. ಚಿಂತಿಸಬೇಡಿ, ನಿಮ್ಮ ನಾಡಿಗಿಂತಲೂ ಅದ್ಭುತವಾದ ದೇಗುಲವನ್ನ ಕಟ್ಟಿಸಿ, ನಿಮಗಿಂತಲೂ ಭಕ್ತಿ ಭಾವದಿಂದ ಪೂಜಿಸುತ್ತೇವೆ, ಆರಾಧಿಸುತ್ತೇವೆ. ಭವಿಷ್ಯದಲ್ಲಿ ಮೈಸೂರು ಅರಸರ ಬಗ್ಗೆ ಮಾತನಾಡುವ ಮುನ್ನ ದಯವಿಟ್ಟು ಈ ಪತ್ರವನ್ನ ನೆನಪು ಮಾಡಿಕೊಳ್ಳಿ. ನಮಸ್ಕಾರ.

ಚಿಕ್ಕದೇವರಾಜ ಒಡೆಯರು ಕಳುಹಿಸಿದ್ದ ಆ ಪತ್ರವನ್ನ ಓದಿದ ಶಾಹುಜಿ ಒಂದು ಕ್ಷಣ ದಂಗಾಗಿ ಹೋಗಿದ್ದ. ಮೈಸೂರು ಅರಸರನ್ನ ಕೆಣಕಿದರೆ ಏನಾಗುತ್ತೆ ಎನ್ನುವ ಅರಿವು ಶಾಹುಜಿಗೆ ಅರ್ಥವಾಗಿತ್ತು. ಚಿಕ್ಕದೇವರಾಜ ಒಡೆಯರು ಪತ್ರದಲ್ಲಿ ಉಲ್ಲೇಖಿಸಿದಂತೆ ಶ್ರೀರಂಗಪಟ್ಟಣದಲ್ಲಿ ಆ ಶ್ವೇತ ವರಾಹ ಸ್ವಾಮಿ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಿ ಅದ್ಭುತವಾದ ದೇಗುಲ ಕಟ್ಟಿಸುತ್ತಾರೆ. ಬಳಿಕ ಅಂದ್ರೆ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾವಣೆಯಾದ ಬಳಿಕ 1809ರಲ್ಲಿ ಮುಮ್ಮಡಿ ಕೃಷ್ಣದೇವರಾಜ ಒಡೆಯರ್​ ಅವರು aದನ್ನ ಮೈಸೂರಿಗೆ ಸ್ಥಳಾಂತರ ಮಾಡುತ್ತಾರೆ.. ಮೈಸೂರು ಅರಮನೆಯ ಬಲಭಾಗದಲ್ಲಿ ಹೊಸದೊಂದು ದೇಗುಲವನ್ನ ನಿರ್ಮಾಣ ಮಾಡಿ, ಅಲ್ಲಿ ಶ್ವೇತವರಾಹ ಸ್ವಾಮಿಯ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡುತ್ತಾರೆ.

ಮೈಸೂರು ಮಹಾರಾಜರು ಕಟ್ಟಿದ ದೇಗುಲಗಳಲ್ಲೇ ಶ್ವೇತವರಾಹ ದೇವಾಲಯ ಅತ್ಯಂತ ವಿಶಿಷ್ಟವಾದದ್ದು.. ಇದು ಹೊಯ್ಸಳ ಶೈಲಿಯ ದೇಗುಲವಾಗಿದೆ. ಇವತ್ತಿನ ಕಾಲದಲ್ಲಿ ಬೇಕಿದ್ದರೂ ಅದನ್ನ ದೇಗುಲವನ್ನ ಬಿಚ್ಚಿ ಪುನಃ ನಿರ್ಮಿಸಬಹುದು. ಆ ವಿನೂತನ ಶೈಲಿಯಲ್ಲಿ ಶ್ವೇತವರಾಹ ದೇವಾಲಯ ನಿರ್ಮಾಣವಾಗಿದೆ.

ಶ್ವೇತವರಾಹ ದೇವರ ಬಗ್ಗೆ ಮಹಾರಾಜರಿಗೆ ಇನ್ನಿಲ್ಲದ ಭಕ್ತಿ. ಆದರೆ ರಾಜಪರಿವಾರ ಎಂದಿಗೂ ವರಾಹ ದ್ವಾರದಿಂದ ಅರಮನೆಯ ಒಳಗೆ ಅಥವಾ ಹೊರಗೆ ಹೋಗುವುದಿಲ್ಲ. ಯಾಕೆಂದರೆ ವರಾಹ ವಿಷ್ಣುವಿನ ಅವತಾರ. ವರಾಹನ ಪಾದದ ಅಡಿಯಲ್ಲಿ ಹೋಗುವುದು ವೈಕುಂಠಕ್ಕೆ ಮಾತ್ರ. ಅರ್ಥಾತ್​ ಸಾವಿನ ಸಮಯದಲ್ಲಿ ಮಾತ್ರ ವರಾಹ ದ್ವಾರದ ಮೂಲಕ ಹೋಗಬೇಕು ಎನ್ನುವುದು ನಂಬಿಕೆ. ಇದೇ ಕಾರಣಕ್ಕೆ ರಾಜಪರಿವಾರದಲ್ಲಿ ಯಾರೇ ನಿಧನ ಹೊಂದಿದರೂ ವರಾಹ ಧ್ವಾರದ ಮೂಲಕವೇ ತೆಗೆದುಕೊಂಡು ಹೋಗಲಾಗುತ್ತೆ.