ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಎಟಿಎಂ, ಯುಪಿಐ ಬಂದ ಬಳಿಕ ಬ್ಯಾಂಕಿಂಗ್ ವ್ಯವಸ್ಥೆ ಬಹಳ ಸುಗಮಗೊಂಡಿದೆ.
ಎಟಿಎಂನಲ್ಲಿ ಕ್ಯಾಷ್ ಪಡೆಯುವುದರಿಂದ ಹಿಡಿದು ಸ್ಟೇಟ್ಮೆಂಟ್ ವರೆಗೆ ಹಲವು ಕಾರ್ಯಗಳನ್ನು ಮಾಡಬಹುದು. ನಮಗೆ ಕ್ಯಾಷ್ ಹಣ ಬೇಕೆಂದರೆ ಬ್ಯಾಂಕಿಗೆ ಹೋಗಿ ನಮ್ಮ ಖಾತೆಯಿಂದ ಹಣ ವಿತ್ಡ್ರಾ ಮಾಡುತ್ತೇವೆ. ಇಲ್ಲವಾದರೆ ಎಟಿಎಂನಲ್ಲಿ ಕ್ಯಾಷ್ ಪಡೆಯುತ್ತೇವೆ. ಎಟಿಎಂನಲ್ಲಿ ಕ್ಯಾಷ್ ಪಡೆಯಲು ಕಾರ್ಡ್ ಬೇಕು. ಆದರೆ, ಈಗ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಕ್ಯಾಷ್ ಪಡೆಯಬಹುದು. ಐಸಿಸಿಡಬ್ಲ್ಯೂ ಅಥವಾ ಇಂಟರಾಪರಬಲ್ ಕಾರ್ಡ್ಲೆಸ್ ಕ್ಯಾಷ್ ವಿತ್ ಡ್ರಾಯಲ್ ಎಂಬ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ನಾವು ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ಪಡೆಯಲು ಸಾಧ್ಯವಾಗುತ್ತದೆ.
ದಿನಕ್ಕೆ ಗರಿಷ್ಠ 10,000 ರೂ ಮಾತ್ರ ಪಡೆಯಲು ಸಾಧ್ಯ
ಯುಪಿಐ ಮೂಲಕ ಎಟಿಎಂನಲ್ಲಿ ದಿನಕ್ಕೆ ಎರಡು ಬಾರಿ ಮಾತ್ರ ಕ್ಯಾಷ್ ಡ್ರಾ ಮಾಡಬಹುದು. ಒಮ್ಮೆಗೆ ಗರಿಷ್ಠ 5,000 ರೂವರೆಗೂ ಮಾತ್ರ ಹಣ ಪಡೆಯಬಹುದು. ಅಂದರೆ ದಿನಕ್ಕೆ 10,000 ರೂಗಿಂತ ಹೆಚ್ಚು ಹಣ ವಿತ್ಡ್ರಾಗೆ ಸದ್ಯಕ್ಕೆ ಅವಕಾಶ ಇಲ್ಲ.