ಬೆಂಗಳೂರಿನಿಂದ ತುಮಕೂರು ಸುಮಾರು 70 ಕಿ.ಮೀ ದೂರದಲ್ಲಿದೆ. ಕುಟುಂಬ ಅಥವಾ ಸ್ನೇಹಿತರೊಟ್ಟಿಗೆ ತುಮಕೂರಿಗೆ ನೀವು ಒನ್ ಡೇ ಟ್ರಿಪ್ ಯೋಜಿಸಬಹುದು. ಇಲ್ಲಿ ಪ್ರಾಚೀನ ಕೋಟೆ, ರಾಮಾಯಣವನ್ನು ನೆನಪಿಸುವ ಪವಿತ್ರ ಸ್ಥಳ, ವಿಶಾಲವಾದ ಅರಣ್ಯ, ಆಧ್ಯಾತ್ಮಿಕತೆಯನ್ನು ಇಮ್ಮಡಿಗೊಳಿಸುವ ದೇವಾಲಯಗಳು, ಥ್ರಿಲ್ಲಿಂಗ್ ಅನುಭವ ಪಡೆಯಲು ಬೆಟ್ಟದ ಚಾರಣಗಳನ್ನು ಇಲ್ಲಿ ಕೈಗೊಳ್ಳಬಹುದು.
ಜನರು ಕರ್ನಾಟಕದ ಅನೇಕ ಭಾಗಗಳಿಂದ ತುಮಕೂರಿನ ಆಸುಪಾಸಿನ ಅದ್ಭುತ ಸ್ಥಳಗಳನ್ನು ಸಂದರ್ಶಿಸಲು ಭೇಟಿ ನೀಡುತ್ತಾರೆ. ನೀವು ಒನ್ ಡೇ ಟ್ರಿಪ್ನಲ್ಲಿ ಯಾವೆಲ್ಲಾ ಸುಂದರವಾದ ತಾಣಗಳಿಗೆ ಹೋಗಿ ಬರಬಹುದು ಎಂಬುದನ್ನು ಇಲ್ಲಿ ಮಾಹಿತಿ ನೀಡಲಾಗಿದೆ ಓದಿ ಒಮ್ಮೆ ಭೇಟಿ ನೀಡಿ.
ಭೋಗ ನರಸಿಂಹ ದೇವಾಲಯ
ತುಮಕೂರಿನಲ್ಲಿ ಸಾಕಷ್ಟು ಸುಂದರವಾದ ದೇವಾಲಯಗಳಿವೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ಆಲಯಗಳಲ್ಲಿ ಭೋಗ ನರಸಿಂಹ ದೇವಾಲಯವು ಒಂದಾಗಿದೆ. ಹೆಸರೇ ಸೂಚಿಸುವಂತೆ ವಿಷ್ಣುವಿನ ಅವತಾರಗಳಲ್ಲಿ ಒಂದಾದ ನರಸಿಂಹ ಸ್ವಾಮಿ ದೇವಾಲಯ ಇದಾಗಿದೆ.
ಆಲಯವು ಬೆಟ್ಟದ ತಪ್ಪಲಿನಲ್ಲಿದ್ದು, ಚಾರಣದ ಮೂಲಕ ತಲುಪಬಹುದಾಗಿದೆ. ಬೆಟ್ಟದ ತುದಿಯಿಂದ ಪಟ್ಟಣದ ವಿಹಂಗಮ ನೋಟವನ್ನು ಸ್ವಲ್ಪ ಹೊತ್ತು ಆನಂದಿಸಬಹುದು.
ಯೋಗ ನರಸಿಂಹ ಸ್ವಾಮಿ ದೇವಾಲಯ
ಇದು ಕೂಡ ದೇವರಾಯನದುರ್ಗದಲ್ಲಿದ್ದು, 2 ನೇ ಜನಪ್ರಿಯ ಆಲಯವಾಗಿದೆ. ಇದು ಭೋಗ ನರಸಿಂಹದಿಂದ ಸ್ವಲ್ಪ ಎತ್ತರದ ಬೆಟ್ಟದ ಮೇಲೆ ನೆಲೆಸಿದೆ. ಯೋಗ ನರಸಿಂಹ ಸ್ವಾಮಿ ದೇವಾಲಯವು ಪುರಾತನವಾದ ಆಲಯವಾಗಿದ್ದು, ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಕಣ್ಣು ಕುಕ್ಕುವ ಸ್ತಂಭಗಳು, ಸಂಕೀರ್ಣ ಕೆತ್ತನೆಗಳು ಆಲಯದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಆಲಯಕ್ಕೆ ದಾವಸ್ ಪೇಟೆಯಿಂದ ಸುಲಭವಾಗಿ ತಲುಪಬಹುದಾಗಿದೆ.
ಶಿವಗಂಗೆ
ಸಮುದ್ರಮಟ್ಟದಿಂದ ಸುಮಾರು 1,368 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ಪವಿತ್ರವಾದ ಯಾತ್ರಾಸ್ಥಳವಾಗಿದೆ. ಇದು ಕೂಡ ತುಮಕೂರಿನ ಸಮೀಪದಲ್ಲಿದೆ. ಮಹಾ ಶಿವ ನೆಲೆಸಿರುವ ಈ ಬೆಟ್ಟವನ್ನು ‘ದಕ್ಷಿಣ ಕಾಶಿ’ ಎಂದು ಕೂಡ ಕರೆಯುತ್ತಾರೆ. ಗಂಗಾಧರೇಶ್ವರ ದೇವಸ್ಥಾನ, ಒಳಕಲ ತೀರ್ಥ, ನಂದಿ ಪ್ರತಿಮೆ, ಪಾತಾಳ ಗಂಗೆ ಇಲ್ಲಿವೆ.
ಇನ್ನು ಸಾಹಸ ಕ್ರೀಡೆಗಳನ್ನು ಕೈಗೊಳ್ಳಲು ಬಯಸುವ ಮಂದಿಗೂ ಕೂಡ ಈ ಬೆಟ್ಟ ಅನೇಕ ಆಯ್ಕೆಗಳನ್ನು ನೀಡುತ್ತದೆ. ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್ಗಳನ್ನು ತೊಡಗಿಸಿಕೊಳ್ಳಬಹುದು.
ದೇವರಾಯನ ದುರ್ಗ ಕೋಟೆ
ಸ್ನೇಹಿತರೊಟ್ಟಿಗೆ ನೀವು ಕೋಟೆಯನ್ನು ಅನ್ವೇಷಿಸಲು ಬಯಸಿದರೆ ಬಹುಶಃ ಈ ದೇವರಾಯನ ದುರ್ಗ ಕೋಟೆ ನಿಮಗೆ ಒಂದೊಳ್ಳೆ ಆಯ್ಕೆಯಾಗಿದೆ. ಇದು ಎತ್ತರದಲ್ಲಿದ್ದು, ಮನೋಹರವಾದ ವಾತಾವರಣವನ್ನು ಹೊಂದಿದೆ.
17 ನೇ ಶತಮಾನದಲ್ಲಿ ಮೈಸೂರು ಒಡೆಯರು ಈ ಭದ್ರವಾದ ಕೋಟೆಯನ್ನು ನಿರ್ಮಿಸಿದ್ದರು ಎಂದು ಇತಿಹಾಸ ತಿಳಿಸುತ್ತದೆ. ಈ ಕೋಟೆ ಅವಶೇಷದ ಸ್ಥಿತಿಯಲ್ಲಿ ಇದೆಯಾದರೂ, ಅಸ್ತಮಿಸುವ ಸೂರ್ಯಾಸ್ತವನ್ನು ನೋಡಲು ಜನರು ಈ ಕೋಟೆ ಇರುವ ಜಾಗಕ್ಕೆ ಭೇಟಿ ನೀಡುತ್ತಾರೆ.
ನಾಮದ ಚಿಲುಮೆ
ತುಮಕೂರಿನ ಪ್ರವಾಸದಲ್ಲಿ ನೀವು ಮಿಸ್ ಮಾಡಿಕೊಳ್ಳಬಾರದ ತಾಣಗಳಲ್ಲಿ ನಾಮದ ಚಿಲುಮೆ ಕೂಡ ಒಂದಾಗಿದೆ. ಇದೊಂದು ನೈಸರ್ಗಿಕ ಚಿಲುಮೆಯಾಗಿದ್ದು, ಬೃಹತ್ ರಂಧ್ರದಿಂದ ನೀರು ಚಿಮ್ಮುತ್ತದೆ.
ರಾಮಾಯಣದ ಜೊತೆ ಸಂಬಂಧ ಹೊಂದಿರುವ ಈ ಸ್ಥಳವು ರಾಮ ತನ್ನ ಹಣೆಗೆ ಸಿಂಧೂರವನ್ನು ಧರಿಸಲು ನೀರಿನ ಅವಶ್ಯಕತೆ ಇರುತ್ತದೆ. ಆಗ ತನ್ನ ಬಾಣದಿಂದ ಬಂಡೆಗೆ ಹೊಡೆದಾಗ ಚಿಲುಮೆಯಾಗಿ ಹೊರಹೊಮ್ಮಿತ್ತು ಎನ್ನಲಾಗಿದೆ. ಆ ಚಿಲುಮೆಯೇ ನಾಮದ ಚಿಲುಮೆ.